ರಾಮನಗರ, ಆ 27 (DaijiworldNews/PY): "ಸರ್ಕಾರ ಹಾಗೂ ಪೊಲೀಸ್ ಇಲಾಖೆಯು ಎಲ್ಲಿಯವರೆಗೂ ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೂ ಮೈಸೂರಿನಲ್ಲಿ ಈ ರೀತಿಯಾದ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಪಟ್ಟಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಅಲ್ಲಿನ ಸರ್ಕಾರ ಅತ್ಯಾಚಾರಿಗಳ ವಿರುದ್ದ ಯಾವ ರೀತಿ ಕ್ರಮ ಕೈಗೊಂಡಿತು ಎನ್ನುವುದು ನಮಗೆ ತಿಳಿದಿದೆ. ನಮ್ಮ ರಾಜ್ಯದಲ್ಲೂ ಕೂಡಾ ಅಂತಹ ಕಠಿಣ ಕ್ರಮಕ್ಕೆ ಮುಂದಾಗಬೇಕು. ಕುಡಿಯಲ್ಲಿಯೇ ದುಷ್ಟರನ್ನು ಚಿವುಟಿ ಹಾಕುವ ಕೆಲಸ ಮಾಡಬೇಕು" ಎಂದಿದ್ದಾರೆ.
ಅತ್ಯಾಚಾರ ಪ್ರಕರಣದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಅವರು ಏಕೆ ಈ ರೀತಿಯಾದ ಹೇಳಿಕೆ ನೀಡಿದರು ನನಗೆ ತಿಳಿದಿಲ್ಲ. ಗೃಹ ಸಚಿವರಾದ ಆರಂಭದಲ್ಲಿಯೇ ಇದರಿಂದ ನಿದ್ದೆಗೆಟ್ಟಿದ್ದೇನೆ ಎನ್ನುವ ಆತಂಕದ ಹೇಳಿಕೆ ನೀಡಿದ್ದರು. ಗೃಹ ಇಲಾಖೆಯು ಸೂಕ್ಷ್ಮವಾದ ಇಲಾಖೆಯಾಗಿದ್ದು, ಉತ್ತಮವಾಗಿ ಕೆಲಸ ಮಾಡದೇ ಇದ್ದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ನಿರ್ವಹಣೆ ಮಾಡುವುದು ಕಷ್ಟ" ಎಂದು ಹೇಳಿದ್ದಾರೆ.
"ಮೈಸೂರಿನಲ್ಲಿ ಈ ರೀತಿಯಾದ ಅಮಾನವೀಯ ಕೃತ್ಯ ನಡೆಯಬಾರದಿತ್ತು. ಇಲ್ಲಿ ಸರ್ಕಾರದ ವೈಫಲ್ಯ ಇದೆ. ಪೊಲೀಸ್ ಇಲಾಖೆ ಇತ್ತೀಚಿನ ದಿನಗಳಲ್ಲಿ ಕೆಲಸದಲ್ಲಿ ಎಡವುತ್ತಿದ್ದು, ಕೇವಲ ಅಮಾಯಕರ ಮೇಲೆ ಮಾತ್ರವೇ ದಬ್ಬಾಳಿಕೆ ನಡೆಯುತ್ತಿದೆ" ಎಂದಿದ್ದಾರೆ.
"ನಿರ್ಜನ ಪ್ರದೇಶಗಳಲ್ಲಿ ಮದ್ಯಪಾನಕ್ಕೆ ಅವಕಾಶ ನೀಡಿರುವುದೇ ತಪ್ಪು. ಪೊಲೀಸ್ ಇಲಾಖೆಯು, ನಗರ ಪ್ರದೇಶ, ಹಳ್ಳಿಗಲ್ಲಿ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಸರ್ಕಾರ ಎಲ್ಲಿಯವರೆಗೆ ಹಣ ವಸೂಲಿ ಮಾಡಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಳೆ ಮಾಡುತ್ತದೆಯೋ ಅಲ್ಲಿಯ ತನಕ ಇಲಾಖೆಯಲ್ಲಿನ ನಿಷ್ಕ್ರಿಯತೆಯನ್ನು ತಪ್ಪಿಸಲು ಅಸಾಧ್ಯ. ಮೊದಲು ಸಾರ್ವಜನಿಕವಾಗಿ ಮದ್ಯಪಾನ ಹಾಗೂ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು" ಎಂದು ಹೇಳಿದ್ದಾರೆ.