ಮೈಸೂರು, ಆ 27 (DaijiworldNews/MS): ಮೈಸೂರಿನ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ರೇಪ್ ಪ್ರಕರಣದ ಸುಳಿವು ಸಿಕ್ಕಿದ್ದು , ಪ್ರಾಥಮಿಕವಾಗಿ ಮೈಸೂರು ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಅನುಮಾನ ಮೂಡಿದ್ದು , ಇವರ ಪತ್ತೆಗೆ ಬೆಂಗಳೂರು, ಮೈಸೂರಿನ ಪೊಲೀಸರ ಜಂಟಿ ತಂಡ ಶೋಧ ಕಾರ್ಯಾಚರಣೆ ಆರಂಭಿಸಿದೆ.
ಪೊಲೀಸರಿಗೆ ತಮಿಳುನಾಡು ಮೂಲದ ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ ಹಾಗೂ ಕೇರಳ ಮೂಲದ ಮೂವರು ವಿದ್ಯಾರ್ಥಿಗಳ ಮೇಲೆ ಸಂಶಯ ಬಂದಿದ್ದು, ಆಗಸ್ಟ್ 24ರಂದು ರಾತ್ರಿ 7 ಗಂಟೆ ಸುಮಾರಿಗೆ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು, ಕೃತ್ಯ ನಡೆದ ಬಳಿಕ ಆರೋಪಿಗಳು ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ಎಸ್ಕೆಪ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಅಧಿಕಾರಿಗಳಿಗೆ ದೊರಕಿದ ಒಂದೇ ಒಂದು ಖಚಿತ ಸುಳಿವಿನಿಂದ ಆರೋಪಿಗಳ ಮಾಹಿತಿ ಸಿಕ್ಕಿದ್ದು ಇದನ್ನು ಬೆನ್ನತ್ತಿ ಹುಡುಕಾರಿದಾಗ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ನಾಲ್ವರು ಆರೋಪಿಗಳು ಪರೀಕ್ಷೆಗೆ ಗೈರಾಗಿರುವುದು ಖಚಿತವಾಗಿದೆ. ದುಷ್ಕೃತ್ಯ ನಡೆಸಿದ ವಿದ್ಯಾರ್ಥಿಗಳ ಪತ್ತೆಗೆ ಪೊಲೀಸರ ತಂಡ ಕೇರಳಕ್ಕೆ ಹೊರಟಿದೆ ಎಂಬ ಮಾಹಿತಿ ಲಭ್ಯವಾಗಿದೆ.