ನವದೆಹಲಿ, ಆ.27 (DaijiworldNews/HR): ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಉಗ್ರರ ಅಟ್ಟಹಾಸವನ್ನು ಟೀಕಿಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಕೇರಳದ ಮಾಜಿ ಸಚಿವ, ಮುಸ್ಲಿಂ ಲೀಗ್ ಪಕ್ಷದ ಶಾಸಕ ಎಂ.ಕೆ.ಮುನೀರ್ ಅವರಿಗೆ ಕೊಲೆ ಬೆದರಿಕೆಯ ಅನಾಮಧೇಯ ಪತ್ರವೊಂದು ಬಂದಿರುವುದಾಗಿ ತಿಳಿದು ಬಂದಿದೆ.
ಕೊಲೆ ಬೆದರಿಕೆ ಪತ್ರದಲ್ಲಿ , "24 ಗಂಟೆಯೊಳಗೆ ತಾಲಿಬಾನ್ ವಿರುದ್ಧದ ಫೇಸ್ ಬುಕ್ ಪೋಸ್ಟ್ ಹಾಕಿದನ್ನು ತೆಗೆದುಹಾಕಬೇಕು. ತೆಗೆಯದಿದ್ದರೆ ಶಿಕ್ಷಕ ಜೋಸೆಫ್ ಸರ್ ಅವರ ಹಸ್ತವನ್ನು ಕತ್ತರಿಸಿ ಹಾಕಿದ ಸ್ಥಿತಿಯನ್ನು ನೀವೂ ಕೂಡ ಎದುರಿಸಬೇಕಾಗುತ್ತದೆ ಎಚ್ಚರ" ಎಂದು ಉಲ್ಲೇಖಿಸಲಾಗಿದೆ ಎಂಬುದಾಗಿ ವರದಿ ವಿವರಿಸಿದೆ.
ಇನ್ನು ಬೆದರಿಕೆ ಪತ್ರವನ್ನು ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರದೇಶದಿಂದ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದ್ದು, ತಾಲಿಬಾನ್ ವಿರುದ್ಧದ ತನ್ನ ನಿಲುವು ಸ್ಪಷ್ಟವಾಗಿರುವುದಾಗಿ ಶಾಸಕ ಮುನೀರ್ ತಿಳಿಸಿದ್ದಾರೆ.
ಶಾಸಕ ಮುನೀರ್ ಅವರು ಆಗಸ್ಟ್ 17ರಂದು ತಮ್ಮ ಫೇಸ್ ಬುಕ್ ನಲ್ಲಿ ತಾಲಿಬಾನ್ ಟೀಕಿಸಿ ಬರೆದ ಪೋಸ್ಟ್ ಅನ್ನು ಹಾಕಿರುವುದಾಗಿ ವರದಿ ವಿವರಿಸಿದೆ.