ಬೆಂಗಳೂರು, ಆ 27 (DaijiworldNews/PY): "ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಕುರಿತು ತಮಗೆ ಸಹಮತ ಇಲ್ಲ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಗ ಜ್ಞಾನೇಂದ್ರ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಅತ್ಯಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಂದರ್ಭ, "ಮೈಸೂರಿನಲ್ಲಿ ರಾತ್ರಿ 7.30 ಕ್ಕೆ ನಿರ್ಜನ ಪ್ರದೇಶಕ್ಕೆ ತೆರಳಿದ್ದಾರೆ. ಆ ಸಂದರ್ಭ ಅವರು ಅಲ್ಲಿಗೆ ಹೋಗಬಾರದಿತ್ತು" ಎಂದಿದ್ದರು.
"ಆ ಸಮಯದಲ್ಲಿ ಅವರನ್ನು ಅಲ್ಲಿಗೆ ಹೋಗಬೇಡಿ ಎಂದು ತಡೆಯುವುದಕ್ಕೆ ಆಗುವುದಿಲ್ಲ. ಯುವಕ ಹಾಗೂ ಯುವತಿ ಆಘಾತಕ್ಕೆ ಒಳಗಾಗಿದ್ದಾರೆ. ಅವರಿಂದ ಸಂಪೂರ್ಣವಾದ ಹೇಳಿಕೆ ಪಡೆದುಕೊಳ್ಳಲು ಆಗಿಲ್ಲ" ಎಂದು ತಿಳಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಸಚಿವರ ಹೇಳಿಕೆಗೆ ಟೀಕೆ ವ್ಯಕ್ತವಾಗಿತ್ತು. ಇದೀಗ ಸಿಎಂ ಅವರು, "ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆ ನೀಡುವಂತೆ ಆದೇಶ ನೀಡಿದ್ದೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಿ ಇಲ್ಲ. ಪ್ರಕರಣದ ತನಿಖಾ ವರದಿಯನ್ನು ನೇರವಾಗಿ ತಮಗೆ ಸಲ್ಲಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದಿದ್ದಾರೆ.