ನವದೆಹಲಿ, ಆ 27 (DaijiworldNews/PY): ನಟ ಸೋನು ಸೂದ್ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ದೇಶ್ ಕೆ ಮೆಂಟರ್ಸ್ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ.
ಸಿಎಂ ಕೇಜ್ರಿವಾಲ್ ಅವರು ಈ ಕುರಿತು ಮಾಹಿತಿ ನೀಡಿದ್ದು," ನಟ ಸೋನು ಸೂದ್ ಅವರು ದೆಹಲಿ ಸರ್ಕಾರದ ದೇಶ್ ಕೆ ಮೆಂಟರ್ಸ್ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇದು ಎಎಪಿ ಸರ್ಕಾರದ ಅತೀದೊಡ್ಡ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಆಯ್ಕೆ ಮಾಡಲು ಮಾರ್ಗದರ್ಶನ ನೀಡಲಾಗುವುದು" ಎಂದಿದ್ದಾರೆ.
"ಸರ್ಕಾರಿ ಶಾಲೆಗಳಲ್ಲಿ ಕೆಲವು ವಿದ್ಯಾರ್ಥಿಗಳು ತೀರಾ ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದು, ಅವರಿಗೆ ಮಾರ್ಗದರ್ಶನ ನೀಡಲು ಕೆಲವೇ ಜನರಿದ್ದಾರೆ. ಈ ಮಕ್ಕಳಿಗೆ ಮಾರ್ಗದರ್ಶಕರಾಗಲು ನಾವು ವಿದ್ಯಾವಂತರಿಗೆ ಮನವಿ ಮಾಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
"ನಾವು ಕೇವಲ ಈ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿದ್ದೇವೆ. ರಾಜಕೀಯ ವಿಚಾರವಾಗಿ ಯಾವುದೇ ಚರ್ಚೆ ನಡೆದಿಲ್ಲ" ಎಂದು ಹೇಳಿದ್ದಾರೆ.