ಮೈಸೂರು, ಆ.27 (DaijiworldNews/HR): ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿಯ ಸ್ನೇಹಿತ ಪೊಲೀಸರಿಗೆ ಮಹತ್ವದ ಮಾಹಿತಿಗಳನ್ನು ನೀಡಿದ್ದು, 6 ಜನರ ಗುಂಪು ತನ್ನ ಸ್ನೇಹಿತೆಯನ್ನು ಎಳೆದೊಯ್ದು ಕೃತ್ಯವೆಸಗಿದ್ದಾರೆ ಎಂದು ತಿಳಿಸಿದ್ದಾನೆ.
ಈ ಕುರಿತು ಪೊಲೀಸರಿಗೆ ವಿವರಣೆ ನೀಡಿದ ಯುವಕ, ಆಗಸ್ಟ್ 24ರಂದು ಸಂಜೆ 7:25ರ ಸುಮಾರಿಗೆ ಕ್ಲಾಸ್ ಮುಗಿಸಿಕೊಂಡು ನಾನು ನನ್ನ ಗೆಳತಿ ಬೈಕ್ ನಲ್ಲಿ ಹೊರಟಿದ್ದೆವು. ಜೆ ಎಸ್ ಎಸ್ ಕಾಲೇಜು ಬಳಿಯ ಕಚ್ಚಾ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳಿದ್ದೆವು. ನಾವು ಅಲ್ಲಿ ಬೈಕ್ ನಿಲ್ಲಿಸಿದಾಗ 25-30 ವರ್ಷದ 6 ಯುವಕರು ನಾವಿದ್ದ ಸ್ಥಳಕ್ಕೆ ಬಂದು ನನ್ನ ಮೇಲೆ ಏಕಾಏಕಿ ದೊಣ್ಣೆಯಿಂದ ಹಲ್ಲೆ ಮಾಡಿ ನನ್ನ ಸ್ನೇಹಿತೆಯನ್ನು ಎಳೆದೊಯ್ದಿದ್ದಾರೆ ಎಂದು ವಿವರಿಸಿದ್ದಾರೆ.
ಇನ್ನು ನನ್ನ ಸ್ನೇಹಿತೆಯನ್ನು ಪೊದೆಗಳಿದ್ದ ಜಾಗಕ್ಕೆ ಎಳೆದೊಯ್ದಿದ್ದಾರೆ. ಇದೇ ವೇಳೆ ಯುವಕರ ಗುಂಪಿನಲ್ಲಿದ್ದ ಓರ್ವ ನನಗೆ ಕಲ್ಲಿನಿಂದ ತಲೆಗೆ ಹೊಡೆದ. ಇದರಿಂದ ನಾನು ಪ್ರಜ್ಞೆ ತಪ್ಪಿ ಬಿದ್ದೆ. 15 ನಿಮಿಷದ ಬಳಿಕ ನನಗೆ ಪ್ರಜ್ಞೆ ಬಂತು. ನನ್ನ ತಂದೆಗೆ ಕಾಲ್ ಮಾಡಿಸಿ 3 ಲಕ್ಷ ರೂಪಾಯಿ ತರುವಂತೆ ಒತ್ತಾಯ ಮಾಡಿದ್ದು, ನನ್ನ ಗೆಳತಿಯನ್ನು ಎಳೆದುಕೊಂಡು ಬಂದರು. ಅಷ್ಟೊತ್ತಿಗೆ ನನ್ನ ಸ್ನೇಹಿತೆ ಗಾಯಗೊಂಡು ನಿತ್ರಾಣರಾಗಿದ್ದರು ಎಂದು ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.