ಅಸ್ಸಾಂ, ಆ.27 (DaijiworldNews/HR): ಶಂಕಿತ ಉಗ್ರರು ಏಳು ಟ್ರಕ್ಗಳ ಮೇಲೆ ಗುಂಡು ಹಾರಿಸಿ ನಂತರ ಬೆಂಕಿ ಹಚ್ಚಿದ ಪರಿಣಾಮ ಐವರು ಜನರು ಮೃತಪಟ್ಟು, ಒಬ್ಬರು ಗಾಯಗೊಂಡ ಘಟನೆ ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ರಾತ್ರಿ 8.30ರ ಸುಮಾರಿಗೆ ಶಸ್ತ್ರಸಜ್ಜಿತ ಜನರ ಗುಂಪು ಸಿಮೆಂಟ್ ಸಾಗಿಸುತ್ತಿದ್ದ ಆರು ಮತ್ತು ಕಲ್ಲಿದ್ದಲು ತುಂಬಿದ ಟ್ರಕ್ ಗಳನ್ನು ನಿಲ್ಲಿಸಿ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಉಗ್ರರ ಗುಂಪು ಹಲವಾರು ನಿಮಿಷಗಳ ಕಾಲ ವಾಹನಗಳ ಮೇಲೆ ಗುಂಡು ಹಾರಿಸಿ ಬಳಿಕ ಅವರಿಗೆ ಬೆಂಕಿ ಹಚ್ಚಿತು. ಘಟನೆಯಲ್ಲಿ ಐದು ಜನರು ಮೃತಪಟ್ಟಿದ್ದು, ಒಬ್ಬರಿಗೆ ಗಾಯವಾಗಿದೆ ಎಂದು ದಿಮಾ ಹಸಾವೊ ದ ಪೊಲೀಸ್ ಅಧೀಕ್ಷಕ ಜಯಂತ್ ಸಿಂಗ್ ಹೇಳಿದರು.
ಘಟನೆ ನಡೆದ ತಕ್ಷಣ ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ಸಾಗಿಸಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸಿಂಗ್ ತಿಳಿಸಿದ್ದಾರೆ.