ಮೈಸೂರು, ಆ 27 (DaijiworldNews/PY): ಮೈಸೂರಿನಲ್ಲಿ ನಡೆದ ದರೋಡೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ರಾಜಸ್ಥಾನ ಮೂಲದವರು ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಪುಣೆಯ ಏರ್ ಪೋರ್ಟ್ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ, ಓರ್ವ ಸ್ಥಳೀಯನನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಆಗಸ್ಟ್ 23ರಂದು ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಆಂಡ್ ಸಿಲ್ವರ್ ಪ್ಯಾಲೇಸ್ನಲ್ಲಿ ದರೋಡೆ ಶೂಟೌಟ್ ನಡೆದಿತ್ತು. ಮಾಲೀಕನಿಗೆ ಥಳಿಸಿ ಬಳಿಕ ಚಿನ್ನಾಭರಣ ದರೋಡೆ ಮಾಡಲಾಗಿತ್ತು. ಅಲ್ಲದೇ ಚಿನ್ನದ ಅಂಗಡಿಗೆ ಬಂದಿದ್ದ ಚಂದ್ರು ಎಂಬ ಗ್ರಾಹಕನ ಮೇಲೆ ಗುಂಡು ಹಾರಿಸಲಾಗಿತ್ತು. ಪರಿಣಾಮ ಚಂದ್ರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ದರೋಡೆಕೋರರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಗಳ ಆಧಾರದಲ್ಲಿ ತನಿಖೆ ನಡೆಸಿದ್ದ ಪೊಲೀಸರು, ದರೋಡೆಕೋರರನ್ನು ಬಂಧಿಸಿದ್ದಾರೆ.