ಶಿವಮೊಗ್ಗ, ಆ 27 (DaijiworldNews/PY): ಕಾಂಗ್ರೆಸ್ ನಾಯಕರ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ವಿರುದ್ದ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಈಶ್ವರಪ್ಪ ಅವರ ವಿರುದ್ದ, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಗಿರೀಶ್ ಹಾಗೂ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್ ಕುಮಾರ್ ಎನ್ನುವವರು ದೂರು ದಾಖಲಿಸಿದ್ದಾರೆ.
ಮಠ ಮಾಂಗಲ್ಯ ಮಂದಿರದಲ್ಲಿ ಆ.8ರಂದು ನಡೆದ ನಗರ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಸಚಿವರ ಪ್ರಚೋದನಕಾರಿ ಹೇಳಿಕೆಗಳನ್ನು ಗಿರೀಶ್ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದು, "ಈ ಹೇಳಿಕೆಯು ಕೋಮು ಘರ್ಷಣೆಗೆ ಕಾರಣವಾಗಬಹುದು" ಎಂದಿದ್ದಾರೆ.
"ಬೆಂಗಳೂರಿನಲ್ಲಿ ಆ.10ರಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಈಶ್ವರಪ್ಪ ಅವರು ಕಾಂಗ್ರೆಸ್ ನಾಯಕರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ" ಎಂದು ಪ್ರವೀಣ್ ಕುಮಾರ್ ದೂರಿದ್ದಾರೆ. ಈ ಬಗ್ಗೆ ಆ.11ರಂದು ಕೋಟೆ ಪೊಲೀಸರು ದೂರು ದಾಖಲಿಸಿದ್ದಾರೆ.