ಬೆಂಗಳೂರು, ಆ.26 (DaijiworldNews/SM): ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ಸಿಗರು ನನ್ನ ಮೇಲೆ ರೇಪ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.
ಗೃಹ ಸಚಿವರಾಗಿದ್ದುಕೊಂಡು ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ವಿರೋಧಕ್ಕೆ ಕಾರಣವಾಗಿದೆ. ರಾಜ್ಯದ ಮುಖ್ಯಮಂತ್ರಿಯ ಬಳಿಕದ ಸ್ಥಾನವಾಗಿದ್ದು ಈಹುದ್ದೆಯಲ್ಲಿರುವ ಸಂದರ್ಭದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಹಾಗೂ ಜವಾಬ್ದಾರಿಯುತವಾದ ಹೇಳಿಕೆಗಳನ್ನು ನೀಡಬೇಕಾಗುತ್ತದೆ. ಆದರೆ, ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಮಾತ್ರ ವಿವಾದಾತ್ಮಕವಾಗಿದೆ. ಅನುಭವದ ಕೊರತೆಯಿಂದಾಗಿ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎನ್ನಲಾಗಿದೆ.
ಇನ್ನು ಈ ಹಿಂದೆ ಗೃಹಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದರು. ಅನಗತ್ಯ ಹೇಳಿಕೆ ನೀಡದೆ ವಿವಾದಗಳಿಂದ ದೂರ ಇರುತ್ತಿದ್ದರು. ಆದರೆ, ಅರಗ ಗೃಹ ಸಚಿವರಾಗಿದ್ದು, ಅನಗತ್ಯ ಹೇಳಿಕೆಗಳ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.
ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದೇನು?
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ರೇಪ್ ನಡೆದಿರೋದು ಮೈಸೂರಿನಲ್ಲಿ ಆದರೆ, ಕಾಂಗ್ರೆಸ್ಸಿಗರು ನನ್ನ ಮೇಲೆ ರೇಪ್ ಮಾಡಲು ಯತ್ನಿಸುತ್ತಿದ್ದಾರೆ. ಈ ಘಟನೆಯಿಂದ ಕಾಂಗ್ರೆಸ್ನವರು ರಾಜಕೀಯ ಲಾಭ ಗಳಿಸಲು ಯತ್ನಿಸುತ್ತಿದ್ದಾರೆ. ಯುವಕ ಹಾಗೂ ಯುವತಿ ಸಂಜೆ ೭.೩೦ರ ವೇಳೆಗೆ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು. ಆದರೆ. ಅವರನ್ನು ಹೋಗಬಾರದು ಎಂದು ತಡೆಯುವುದಕ್ಕೂ ಆಗುತ್ತಿರಲಿಲ್ಲ ಎಂದಿದ್ದಾರೆ.