ಬೆಂಗಳೂರು, ಆ 26 (DaijiworldNews/PY): ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದು, "ಕಾಂಗ್ರೆಸ್ನ ಯಾರ್ಯಾರಿಂದ ರೇಪ್ ಆಗಿದೆ ಅವರನ್ನು ಬಂಧಿಸಲಿ" ಎಂದಿದ್ದಾರೆ.
"ಗೃಹ ಸಚಿವರಾಗಿ ಈ ರೀತಿಯಾದ ಹೇಳಿಕೆ ನೀಡಿರುವುದು ಖಂಡನೀಯ. ಗೃಹ ಸಚಿವರು ರೇಪ್ ಎನ್ನುವ ಪದವನ್ನು ಬಹಳ ಗೌರವಯುತ ಎನ್ನುವ ರೀತಿಯಲ್ಲಿ ಬಳಸುತ್ತಿದ್ದಾರೆ. ಈ ಪದ ಸಚಿವರಿಗೆ ತುಂಬಾ ಪ್ರಿಯಾವಾದ ಪದವಾಗಿದ್ದು, ಆ ಪದವನ್ನು ಸರಳ ಎನ್ನುವಂತೆ ಬಳಸುತ್ತಿದ್ದಾರೆ. ಕಾಂಗ್ರೆಸ್ನವರು ರೇಪ್ ಮಾಡಿದ್ಧಾರೆ ಎಂದು ಹೇಳಿದ ಮೇಲೆ ಯಾರು ರೇಪ್ ಮಾಡಿದ್ದಾರೆ ಪೊಲೀಸರು ಅವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಲಿ" ಎಂದು ಆಗ್ರಹಿಸಿದ್ದಾರೆ.
"ಸಿದ್ದರಾಮಯ್ಯ ಮಾಡಿದ್ದಾರಾ?. ಉಗ್ರಪ್ಪ ಮಾಡಿದ್ದಾರಾ?. ಹೆಚ್.ಎಂ ರೇವಣ್ಣ ಮಾಡಿದ್ದಾರಾ?. ಅಥವಾ ಡಿ.ಕೆ ಶಿವಕುಮಾರ್ ಮಾಡಿದ್ದಾರಾ? ಯಾರೇ ರೇಪ್ ಮಾಡಿದ್ದರೂ ಅವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಲಿ" ಎಂದಿದ್ದಾರೆ.
"ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನಿಂದ ವಿ.ಎಸ್ ಉಗ್ರಪ್ಪ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗುತ್ತಿದೆ. ಈ ತಂಡದಲ್ಲಿ ತನ್ವೀರ್ ಸೇಠ್ ಹಾಗೂ ಹೆಚ್.ಎಂ ರೇವಣ್ಣ ಅವರೂ ಇರಲಿದ್ದಾರೆ" ಎಂದು ತಿಳಿಸಿದ್ದಾರೆ.