ಬೆಂಗಳೂರು, ಆ 26 (DaijiworldNews/MS): ಪರಿಶಿಷ್ಟ ಜಾತಿಗೆ ಯುವಕನೊಬ್ಬನನ್ನು ಠಾಣೆಗೆ ಎಳೆದೊಯ್ದು ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಅಮಾನತುಗೊಂಡ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೆ. ಅರ್ಜುನ್ ಹೊರಕೇರಿ ಅವರ ಜಾಮೀನು ಅರ್ಜಿಯನ್ನು ಬುಧವಾರ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತು.
ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಈ ಹಿಂದೆ ಚಿಕ್ಕಮಗಳೂರಿನ ಮೊದಲನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಕೂಡ ಅರ್ಜುನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ ಅರ್ಜುನ್ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜುನ್ ಅವರ ಪರವಾಗಿ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ವಾದಿಸಿದ್ದರು. ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಸಂತ್ರಸ್ತ ಯುವಕ ಕೆ ಎಲ್ ಪುನೀತ್ ಅವರನ್ನು ವಕೀಲರಾದ ಮೊಹಮ್ಮದ್ ಆಸೀಫ್ ಸಾದುಲ್ಲಾ, ಎಸ್. ಶಿವಮಣಿದನ್ ಹಾಗೂ ಬಸವಪ್ರಸಾದ್ ಕುನಾಲೆ ಪ್ರತಿನಿಧಿಸಿದ್ದರು.
ಪ್ರಕರಣವೊಂದರ ವಿಚಾರಣೆಗೆಂದು ಕರೆತಂದು ಪಿಎಸ್ಐ ಬೇರೆ ಆರೋಪಿಯ ಮೂತ್ರ ಕುಡಿಸಿದ್ದರು ಎಂದು ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಪಿ.ಎಸ್.ಐ. ಅರ್ಜುನ್ ವಿರುದ್ಧ ಕಿರಗುಂದ ಗ್ರಾಮದ ಯುವಕ ಕೆ ಎಲ್ ಪುನೀತ್ ದೂರು ಸಲ್ಲಿಸಿದ್ದರು.