ನವದೆಹಲಿ, ಆ 26 (DaijiworldNews/PY): "ಅಫ್ಗಾನಿಸ್ತಾನದಿಂದ ಭಾರತೀಯರ ಸ್ಥಳಾಂತರಿಸುವುದಕ್ಕೆ ಮೊದಲ ಆದ್ಯತೆ" ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ವಿವಿಧ ರಾಜಕೀಯ ಪಕ್ಷಗಳ ಸಂಸದೀಯ ನಾಯಕರಿಗೆ ಮಾಹಿತಿ ನೀಡಲು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, "ಅಫ್ಘಾನಿಸ್ತಾನದಿಂದ ಸಾಧ್ಯವಾದಷ್ಟು ಜನರನ್ನು ಸ್ಥಳಾಂತರಿಸಲು ಭಾರತ ಪ್ರಯತ್ನಿಸುತ್ತಿದೆ. ಭಾರತೀಯ ಪ್ರಜೆಗಳ ಸ್ಥಳಾಂತರಕ್ಕೆ ಮೊದಲ ಆದ್ಯತೆ" ಎಂದಿದ್ದಾರೆ.
"ಯುದ್ಧ ಪೀಡಿತ ಅಫ್ಗಾನಿಸ್ತಾನದ ಸದ್ಯದ ಸ್ಥಿತಿ ಗಂಭೀರವಾಗಿದೆ. ಅಲ್ಲದೇ, ತಾಲಿಬಾನ್ ದೋಹಾ ಒಪ್ಪಂದದಲ್ಲಿ ನೀಡಿದ್ದ ಭರವಸೆಗಳನ್ನು ಮುರಿದಿದೆ" ಎಂದು ಹೇಳಿದ್ದಾರೆ.
ಕಳೆದ ವರ್ಷದ ಫೆಬ್ರವರಿಯಲ್ಲಿ ತಾಲಿಬಾನ್ ಮುಖಂಡರ ಹಾಗೂ ಅಮೇರಿಕಾದ ನಡುವೆ ನಡೆದ ದೋಹಾ ಶಾಂತಿ ಒಪ್ಪಂದದಲ್ಲಿ ಕಾಬೂಲ್ ಸರ್ಕಾರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಅವಕಾಶ ನೀಡುವುದು ಸೇರಿ ಅನೇಕ ಭರವಸೆಗಳನ್ನು ನೀಡಿತ್ತು.