ಹೈದರಾಬಾದ್, ಆ 26 (DaijiworldNews/PY): ನಾಲ್ಕು ವರ್ಷಗಳ ಹಿಂದಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರರಂಗದ 12 ಮಂದಿ ನಟ, ನಟಿಯರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
"ನಟರಾದ ರವಿ ತೇಜಾ, ರಾಣಾ ದಗ್ಗುಬಾಟಿ, ನವದೀಪ್, ತರುಣ್, ನಂದು, ನಟಿಯರಾದ ಮುಮೈತ್ ಖಾನ್, ರಾಕುಲ್ ಪ್ರೀತ್, ಚಾರ್ಮಿ ಕೌರ್, ನಿರ್ದೇಶಕ ಪುರಿ ಜಗನ್ನಾಥ್ ಸೇರಿದಂತೆ 12 ಮಂದಿಗೆ ಸೆ.2ರಿಂದ 22ರ ಒಳಗೆ ವಿಚಾರಣೆಗೆ ಹಾಜರಾಗಬೇಕು" ಎಂದು ಜಾರಿ ನಿರ್ದೇಶನಾಲಯ ಸೂಚನೆ ನೀಡಿದೆ.
"ಸೆ. 6ಕ್ಕೆ ರಾಕುಲ್ ಪ್ರೀತ್ ಸಿಂಗ್, ಸೆ. 8ಕ್ಕೆ ರಾಣಾ ದಗ್ಗುಬಾಟಿ ಹಾಗೂ ಸೆ.9ರಂದು ರವಿತೇಜ, ಸೆ. 31 ರಂದು ನಿರ್ದೇಶಕ ಪುರಿ ಜಗನ್ನಾಥ್ ವಿಚಾರಣೆಗೆ ಹೈದರಬಾದ್ನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು" ಎಂದು ತಿಳಿಸಿದೆ.
"ರಾಣಾ ದಗ್ಗುಬಾಟಿ ಸೇರಿದಂತೆ ರಾಕುಲ್ ಪ್ರೀತ್ ಸಿಂಗ್ ಹಾಗೂ ಪುರಿ ಜಗನ್ನಾಥ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿಲ್ಲ. ಆದರೆ, ಹಣ ವರ್ಗಾವಣೆಯಲ್ಲಿ ಇವರು ಭಾಗಿಯಾಗಿದ್ದಾರೆ ಎನ್ನುವ ಹಿನ್ನೆಲೆ ವಿಚಾರಣೆಗೆ ಕರೆಯಲಾಗಿದೆ" ಎಂದು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
2017ರಲ್ಲಿ ತೆಲಂಗಣದ ಅಬಕಾರಿ ಇಲಾಖೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದು, 12 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು 12 ಪ್ರಕರಣ ದಾಖಲಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಟಾಲಿವುಡ್ಕಲಾವಿದರ ಹೆಸರು ಕೇಳಿಬಂದಿದ್ದು. ಆದರೆ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಯಾರನ್ನೂ ಎಸ್ಐಟಿ ಆರೋಪಿಗಳೆಂದು ಪರಿಗಣಿಸಿರಲಿಲ್ಲ. ಆದರೆ, ಪ್ರಕರಣದ ಸಂಬಂಧ ಕೆಲವರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಿತ್ತು.