ಗುಂಡ್ಲುಪೇಟೆ, ಆ 26 (DaijiworldNews/PY): "ತಿಂಗಳಿಗೆ ಒಬ್ಬ ಮನುಷ್ಯನಿಗೆ 5 ಕೆ.ಜಿ ಅಕ್ಕಿ ಸಾಕು. ಆದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜಕೀಯಕ್ಕಾಗಿ ಅಧಿಕಾರಕ್ಕೆ ಬಂದಲ್ಲಿ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ" ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದರು.
ಬಂಡೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವು ಓರ್ವ ವ್ಯಕ್ತಿಗೆ ಬೇಕಾದಷ್ಟು ಅಕ್ಕಿಯನ್ನು ವಿತರಿಸುತ್ತಿದ್ದೇವೆ. 4.1 ಕೋಟಿ ಮಂದಿಗೆ ಆಹಾರ ಭದ್ರತಾ ಯೋಜನೆಯಡಿ ಪಡಿತರ ವಿತರಿಸುತ್ತಿದ್ದೇವೆ" ಎಂದು ಹೇಳಿದರು.
"ಶೇ 70ರಷ್ಟು ಪಡಿತರದಾರರ ಇ-ಕೆವೈಸಿ ಮುಗಿದಿದೆ. ಅನರ್ಹ ಪಡಿತರದಾರರನ್ನು ಕೈಬಿಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಇ-ಕೆವೈಸಿ ಸಂಪೂರ್ಣವಾದ ನಂತರ ಎಷ್ಟು ಪಡಿತರ ಉಳಿತಾಯವಾಗಲಿದೆ ಎನ್ನುವುದು ತಿಳಿಯಲಿದೆ" ಎಂದರು.
"ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿಯಿಂದ ಕೆಕ್ಕನಹಳ್ಳಿ ಚೆಕ್ ಪೋಸ್ಟ್ವರೆಗೆ ರಸ್ತೆ ವಿಸ್ತರಣೆ ಮಾಡುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿರುವ ಪ್ರಸ್ತಾವದ ಕುರಿತು ಮಾತನಾಡಿದ ಅವರು, ಈ ಪ್ರಸ್ತಾವವನ್ನು ವಿರೋಧಿಸಿ ಪತ್ರ ಬರೆಯಲಾಗಿದೆ. ರಸ್ತೆ ವಿಸ್ತರಣೆ ಹಾಗೂ ರಾತ್ರಿ ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ" ಎಂದು ತಿಳಿಸಿದರು.
"ಈಗ ನನಗೆ 60 ವರ್ಷ. ಹಾಗಾಗಿ ಇನ್ನು 15 ವರ್ಷ ಅವಕಾಶ ಇದೆ. ನಾನು ಶಾಶ್ವತ ಸಿಎಂ ಆಕಾಂಂಕ್ಷಿ. ಈ ಬಗ್ಗೆ ಮುಂದೆ ನೋಡೋಣ" ಎಂದು ಹೇಳಿದರು.