ನವದೆಹಲಿ, ಆ 26 (DaijiworldNews/PY): "ದೇಶದ ಆಸ್ತಿ ಮಾರಾಟ ಮಾಡಿ ಹಣ ಗಳಿಸಿದವರು ಕಾಂಗ್ರೆಸ್ಸಿಗರು" ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.
"2008ರಲ್ಲಿ ಕಾಂಗ್ರೆಸ್ ಅವಧಿಯ ಸಂದರ್ಭ ಮುಂಬೈ ಪುಣೆ ಹೆದ್ದಾರಿ ನಗದೀಕರಣ ಮುಖೇನ 8 ಸಾವಿರ ಕೋಟಿ ರೂ. ಸಂಗ್ರಹ ಮಾಡಲಾಗಿತ್ತು. ಆ ಸಂದರ್ಭ ರಾಹುಲ್ ಗಾಂಧಿ ಏಕೆ ಸುಮ್ಮನಿದ್ದರು?" ಎಂದು ಕೇಳಿದ್ದಾರೆ.
"ರಾಹುಲ್ ಗಾಂಧಿಗೆ ಸಂಪತ್ತು ಕ್ರೋಢೀಕರಣ ಎಂದರೆ ಏನು ಗೊತ್ತು. ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯ ವೇಳೆಯಲ್ಲಿಯೇ ದೇಶದ ಸಂಪನ್ಮೂಲಗಳನ್ನು ಮಾರಾಟ ಮಾಡಿ, ಲಂಚ ಪಡೆದುಕೊಳ್ಳುತ್ತಿತ್ತು. ಸರ್ಕಾರದ ಆಸ್ತಿಯನ್ನು ಮಾರಾಟ ಮಾಡಿ ಆರು ಲಕ್ಷ ಕೋಟಿ ರೂ. ಮೌಲ್ಯದ ಸಂಪನ್ಮೂಲ ಕ್ರೋಢೀಕರಣದ ತೀರ್ಮಾನಕ್ಕೆ ರಾಹುಲ್ ಗಾಂಧಿ ಏಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಕ್ರೋಢೀಕರಣ ಆಸ್ತಿ ನಗದೀಕರಣ ಯೋಜನೆ ಜಾರಿ ಮೂಲಕ ಕೇಂದ್ರ ಸರ್ಕಾರ ದೇಶದ ಆಸ್ತಿಯನ್ನು ಮಾರಾಟ ಮಾಡಲು ಹೊರಟಿದೆ" ಎಂದು ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ.