ಚಿಕ್ಕಮಗಳೂರು, ಆ 26 (DaijiworldNews/MS): ವಾಟ್ಸಪ್ ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿ, ಕಾರು ಸಮೇತ ಭದ್ರಾ ನಾಲೆಗೆ ಬಿದ್ದು ಒಂದೇ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ನಾಲ್ವರಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತಿಬ್ಬರು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.
ಆ.೨೬ ಗುರುವಾರ ಬೆಳಗ್ಗೆ ಘಟನೆ ನಡೆದಿದ್ದು, ವಾಟ್ಸಪ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಯ್ಸ್ ಮೆಸೇಜ್ ಹಾಕಿದ ಭದ್ರಾವತಿ ಮೂಲದ ಹಳೇ ಜೇಡಿಕಟ್ಟೆ ಮೂಲದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಮಂಜು ಪತ್ನಿ ನೀತು (35) ಹಾಗೂ ಅವರ ಪುತ್ರ ಧ್ಯಾನ್ (13) ಅಪಾಯದಿಂದ ಪಾರಾಗಿದ್ದಾರೆ. ಮಂಜು ಹಾಗೂ ಮಂಜು ಅವರ ತಾಯಿ ಸುನಂದಮ್ಮ ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ತರೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.