ನವದೆಹಲಿ, ಆ 26 (DaijiworldNews/PY): "ದೇಶದ ಆಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇಚ್ಛೆಗೆ ಬಂದತೆ ಮಾರಾಟ ಮಾಡಲು ಸಾಧ್ಯವಿಲ್ಲ. ದೇಶದ ಆಸ್ತಿ ಪ್ರಧಾನಿ ಮೋದಿ ಅಥವಾ ಬಿಜೆಪಿಗೆ ಸೇರಿದ್ದು ಅಲ್ಲ" ಎಂದು ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯನ್ನು ಟೀಕಿಸಿರುವ ಅವರು, "ಇದೊಂದು ಆಘಾತಕಾರಿ ಹಾಗೂ ದುರಾದೃಷ್ಟಕರ ತೀರ್ಮಾನ" ಎಂದಿದ್ದಾರೆ.
"ಈ ಸರ್ಕಾರಿ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ವಿಪಕ್ಷಗಳನ್ನು ಸೋಲಿಸಲು ಹಣ ಸಂಗ್ರಹ ಮಾಡಿರುವ ಗುರಿ ಹೊಂದಿದ್ದಾರೆ" ಎಂದು ದೂರಿದ್ದಾರೆ.
"ಈ ದೇಶದ ಆಸ್ತಿ ಪ್ರಧಾನಿ ಮೋದಿ ಅಥವಾ ಬಿಜೆಪಿಗೆ ಸೇರಿದ್ದಲ್ಲ. ಇದು ದೇಶಕ್ಕೆ ಸೇರಿದ್ದು. ಈ ಆಸ್ತಿಗಳನ್ನು ಕೇಂದ್ರ ಸರ್ಕಾರ ತನ್ನ ಇಚ್ಛೆಗೆ ಅನುಗುಣವಾಗಿ ಮಾರಲು ಸಾಧ್ಯವಿಲ್ಲ. ಇಡೇ ದೇಶವೇ ಕೇಂದ್ರ ಸರ್ಕಾರದ ತೀರ್ಮಾನದ ವಿರುದ್ದ ಒಗ್ಗಟ್ಟಾಗಿ ವಿರೋಧಿಸಬೇಕಾಗಿದೆ" ಎಂದಿದ್ದಾರೆ.
ಪಶ್ಚಿಮಬಂಗಾಳ ಬಿಜೆಪಿ ವಕ್ತಾರ ಶಮಿಕ್ ಭಟ್ಟಾಚಾರ್ಯ ಅವರು ಮಮತಾ ಬ್ಯಾನರ್ಜಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದು,"ಒಂದು ವೇಳೆ ದೇಶದ ಆಸ್ತಿ ಬಗ್ಗೆ ನಿಮಗೆ ಕಾಳಜಿ ಇರುವುದೇ ಆದಲ್ಲಿ, ಕಳೆದ ಹತ್ತು ವರ್ಷಗಳಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಹಲವು ಆಸ್ತಿಗಳನ್ನು ಏಕೆ ಮಾರಾಟ ಮಾಡಿದೆ?. ಈ ಎಲ್ಲಾ ಆಸ್ತಿಗಳು ರಾಜ್ಯ ಸರ್ಕಾರಕ್ಕೆ ಸೇರಿದ್ದೋ ಅಥವಾ ತೃಣಮೂಲ ಕಾಂಗ್ರೆಸ್ನದ್ದೋ ಎನ್ನುವುದನ್ನು ತಿಳಿಸಲಿ" ಎಂದು ಹೇಳಿದ್ದಾರೆ.