ಬೆಂಗಳೂರು, ಆ 26 (DaijiworldNews/MS): ಯುವತಿಯನ್ನು ಅತ್ಯಾಚಾರವೆಸಗಿದ ಮಾಜಿ ಸಚಿವರ ರಕ್ಷಣೆ ನಿಂತಂತೆ ಮೈಸೂರಿನ ಅತ್ಯಾಚಾರಿಗಳ ರಕ್ಷಣೆಯನ್ನೂ ಮಾಡುವಂತಿದೆ ಸರ್ಕಾರ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿ, ಮೈಸೂರಿನಂತಹ ನಗರದಲ್ಲಿ ಅತ್ಯಾಚಾರ ಪ್ರಕರಣ ನಡೆದು 24 ಗಂಟೆಗೂ ಅಧಿಕ ಸಮಯ ಕಳೆದಿದ್ದರೂ ಆರೋಪಿಗಳನ್ನು ಬಂಧಿಸಲಾಗದ್ದು ಆಡಳಿತದಲ್ಲಿ ಗೃಹ ಇಲಾಖೆಯ ಕಾರ್ಯಕ್ಷಮತೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ಇದುವರೆಗೂ ಗೃಹಸಚಿವರು, ಬಿಜೆಪಿಯ ಮಹಿಳಾ ನಾಯಕಿಯರು ಸಂತ್ರಸ್ತೆಯನ್ನು ಭೇಟಿಯಾಗದಿರುವುದು ಬಿಜೆಪಿಯ ನಿರ್ಲಕ್ಷ್ಯ ಧೋರಣೆಗೆ ನಿದರ್ಶನ ಎಂದು ಟೀಕಿಸಿದೆ.
ಅತ್ಯಾಚಾರ ನಡೆಸಿದ್ದ ಶಾಸಕ, ಮಾಜಿ ಸಚಿವರನ್ನು ಹೊಂದಿದ ಬಿಜೆಪಿಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ, ಸಿದ್ದು ಸವದಿಯನ್ನ ರಕ್ಷಿಸಿದ ಮಹಿಳಾ ವಿರೋಧಿ ಬಿಜೆಪಿಯಿಂದ ಮಹಿಳೆಯರ ರಕ್ಷಣೆ ಬಗ್ಗೆ ನಿರೀಕ್ಷೆಯಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ.
ಸಾಂಸ್ಕೃತಿಕ ನಗರಿ ಎನಿಸಿಕೊಂಡ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ಅತ್ಯಾಚಾರ ಪ್ರಕರಣವು ಸರ್ಕಾರದ ಕಳಪೆ ಕಾನೂನು ಸುವ್ಯವಸ್ಥೆಗೆ ಕನ್ನಡಿ ಹಿಡಿದಂತಿದೆ. ಹಿಂದೊಮ್ಮೆ ಮಾಧ್ಯಮ ವರದಿಗಾರ್ತಿಗೆ ಅವರು ಆಡಿದ ಅಸಂಬದ್ಧ ಮಾತುಗಳೇ ಬಿಜೆಪಿಯ ಮಹಿಳಾ ವಿರೋಧಿ ಧೋರಣೆ ಹಾಗೂ ಮಹಿಳಾ ರಕ್ಷಣೆಯ ಬಗೆಗೆ ಇರುವ ಉದಾಸೀನತೆ ತೋರುತ್ತದೆ ಎಂದು ಆರೋಪಿಸಿದೆ.