ಮೈಸೂರು, ಆ 26 (DaijiworldNews/PY): ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರದ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಾತಕರು ವಿದ್ಯಾರ್ಥಿನಿಯ ಬೆತ್ತಲೆ ವಿಡಿಯೋ ಮಾಡಿಕೊಂಡು, ತಮ್ಮ ವಿರುದ್ದ ದೂರು ನೀಡಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನಂತರ ವಿದ್ಯಾರ್ಥಿನಿಯೊಂದಿಗೆ ಇದ್ದ ಯುವಕನಿಗೆ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
"ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ ಆರೋಪಿಗಳು ನಾಪತ್ತೆಯಾಗಿದ್ದಾರೆ. ಪೊಲೀಸರು ತನಿಖೆ ನಡೆಸಿದರೂ, ಈವರೆಗೆ ಆರೋಪಿಗಳು ಪತ್ತೆಯಾಗಿಲ್ಲ. ಮದ್ಯದ ನಶೆಯಲ್ಲಿ ಅತ್ಯಾಚಾರ ಮಾಡಿದವರು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಹಾಗಾಗಿ, ಎಡಿಜಿಪಿ ಪ್ರತಾಪ್ ರೆಡ್ಡಿ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ವಿದ್ಯಾರ್ಥಿನಿಯೊಂದಿಗೆ ಇದ್ದ ಆಕೆಯ ಸ್ನೇಹಿತನ ಮಾಹಿತಿ ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ವಿದ್ಯಾರ್ಥಿನ ಆಸ್ಪತ್ರೆಯಲ್ಲಿದ್ದು, ಆರೋಗ್ಯವಾಗಿದ್ದಾಳೆ" ಎಂದು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
"ವಿದ್ಯಾರ್ಥಿನಿಯ ಮೇಲೆ ಸಾಮೂಹಿತ ಅತ್ಯಾಚಾರ ನಡೆಸಿರುವ ವಿಚಾರ ತಿಳಿದುಬಂದಿದೆ. ಈ ಕೃತ್ಯ ಎಸಗಿದವರು ಯಾರೇ ಆಗಿದ್ದರೂ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, "ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಘಟನೆ ದುರದೃಷ್ಟಕರ" ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, "ಮೈಸೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ರಾಜ್ಯದಲ್ಲಿ ಕುಸಿದುಬಿದ್ದಿರುವ ಕಾನೂನು-ಸುವ್ಯವಸ್ಥೆಗೆ ಸಾಕ್ಷಿ. ಪೊಲೀಸರು ತಕ್ಷಣ ದುಷ್ಕರ್ಮಿಗಳನ್ನು ಬಂಧಿಸಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿ, ಭಯಭೀತ ಜನರಲ್ಲಿ ಧೈರ್ಯ ತುಂಬಬೇಕು" ಎಂದು ಹೇಳಿದ್ದಾರೆ.
"ಮೈಸೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಿಎಂ ಬೊಮ್ಮಾಯಿ ಅವರು, ಬಹಳಷ್ಟು ಬೇಗ ಸಂಪುಟ ವಿಸ್ತರಣೆಯ ಸಂಕಟದಿಂದ ಪಾರಾಗಿ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳ ನಿಯಂತ್ರಣಕ್ಕೆ ಗಮನ ಹರಿಸಬೇಕು" ಎಂದು ಒತ್ತಾಯಿಸಿದ್ದಾರೆ.