ಹುಬ್ಬಳ್ಳಿ, ಆ 26 (DaijiworldNews/PY): "1-8ನೇ ತರಗತಿ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಆ. 30ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಟಾಸ್ಕ್ ಫೋಸ್ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆಗಸ್ಟ್ 23ರಿಂದ 9ರಿಂದ 12ನೇ ತರಗತಿಗಳನ್ನು ಆರಂಭಿಸಲಾಗಿದ್ದು, ಅದರ ಸಾಧಕ-ಬಾಧಕಗಳನ್ನು ಗಮನಿಸಿ 1-8ನೇ ತರಗತಿಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗುವುದು" ಎಂದಿದ್ದಾರೆ.
"6 ರಿಂದ 8ನೇ ತರಗತಿ ಪ್ರಾರಂಭ ಮಾಡಬಹುದು ಎಂದು ಉನ್ನತ ಮಟ್ಟದ ತಜ್ಞರ ಸಮಿತಿಯ ಡಾ.ದೇವಿಪ್ರಸಾದ ಶೆಟ್ಟಿ ಅವರು ಸಲಹೆ ನೀಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಆರಂಭವಾದ ಶಾಲೆಗಳ ಕುರಿತು ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರಿಂದ ಉತ್ತಮ ಉತ್ಸಾಹ ಕಂಡುಬಂದಿದ್ದು, ಈ ಕಾರಣದಿಂದ ಶಾಲೆಗಳನ್ನು ಆರಂಭಿಸಬಹುದು ಎನ್ನುವ ಆಲೋಚನೆ ವ್ಯಕ್ತವಾಗುತ್ತಿದೆ. ಆದರೆ, ತಾಂತ್ರಿಕ ಸಮಿತಿಯ ವರದಿಯ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
"ಒಂದು ವರ್ಷದಿಂದ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಮತ್ತೆ ಶಿಕ್ಷಣ ನೀಡುವ ನಿಟ್ಟಿನಲ್ಲಿ 1-8ನೇ ತರಗತಿ ಪ್ರಾರಂಭಿಸಲು ಶಿಕ್ಷಣ ಇಲಾಖೆ ಉತ್ಸುಕವಾಗಿದೆ. ಮಕ್ಕಳ ಮೇಲೆ ಕೊರೊನಾ ಮೂರನೇ ಅಲೆಯು ಪರಿಣಾಮ ಬೀರುವುದಿಲ್ಲ ಎಂದು ಮಕ್ಕಳ ತಜ್ಞರು ಹಾಗೂ ಶಿಕ್ಷಣ ತಜ್ಞರು ಸೇರಿದಂತೆ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆಧಾರದ ಮೇರೆಗೆ ಕೊರೊನಾ ನಿಯಮಾವಳಿಗಳನ್ನು ಅನುಸರಿಸಿ ಶಾಲೆಗಳನ್ನು ಆರಂಭಿಸಲಾಗುವುದು. ಒಂದುವೇಳೆ, ಕೊರೊನಾದ ಮೂರನೇ ಅಲೆ ವ್ಯಾಪಿಸಿದ್ದಲ್ಲಿ ಶಾಲೆಗಳನ್ನು ಬಂದ್ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದು ಹೇಳಿದ್ದಾರೆ.