ಮಂಡ್ಯ, ಆ 26 (DaijiworldNews/PY): "ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾಯಿಸಿದರೆ ಗಂಟಲಲ್ಲಿ ಅನ್ನ ಇಳಿಯುವುದಿಲ್ಲವೇ?. ಇಂದಿರಾ ಕ್ಯಾಂಟೀನ್ ಬದಲಾಯಿಸುವುದು ಬಿಜೆಪಿಯ ಪ್ರಣಾಳಿಕೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಂದಿರಾ ಗಾಂಧಿ ಅವರ ಭಾವಚಿತ್ರ ಇರುವುದರಿಂದ ಅದನ್ನು ಬದಲಾಯಿಸಿ ಅನ್ನಪೂರ್ಣೇಶ್ವರಿ ಎಂದು ನಾಮಕರಣ ಮಾಡುವ ಕುರಿತು ಮಾತನಾಡಿದ್ದೇನೆ. ಹೆಸರು ಬದಲಾವಣೆ ಆದರೂ ಕೂಡಾ ಬಡವರಿಗೆ ಅನ್ನ ನೀಡುವ ಉದ್ದೇಶ ಮಾತ್ರ ಮುಂದುವರಿಯುತ್ತದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.
"ಜವಹರ್ಲಾಲ್ ನೆಹರೂ, ಇಂದಿರಾ ಗಾಂಧಿ ಅವರು ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡಿದ್ದಾರೆ. ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು 1989- 90ರ ತನಕ ಕಾಯಬೇಕಾಯಿತು. ನನ್ನ ಬೆಂಬಲದೊಂದಿಗೆ ರಚನೆಯಾಗಿದ್ದ ವಿ.ಪಿ ಸಿಂಗ್ ಸರ್ಕಾರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಸ್ತಾವದ ಮೇರೆಗೆ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲಾಯಿತು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.