ಬೆಂಗಳೂರು, ಆ 26 (DaijiworldNews/MS): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಘಟನೆಯ ಬಳಿಕ ವಿಪಕ್ಷ ಕಾಂಗ್ರೆಸ್ , ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದ್ದು, ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಉತ್ತರ ಪ್ರದೇಶದ ಮಾದರಿಯಲ್ಲಿಯೇ ರಾಜ್ಯದಲ್ಲೂ ಅತ್ಯಾಚಾರ ಪ್ರಕರಣಗಳು ಘಟಿಸುತ್ತಿವೆ ಎಂದು ಆರೋಪಿಸಿದೆ.
ಘಟನಾ ಸ್ಥಳ
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ "ಸಾಂಸ್ಕೃತಿಕ ನಗರಿ ಎನಿಸಿಕೊಂಡ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ಅತ್ಯಾಚಾರ ಪ್ರಕರಣವು ಬಿಜೆಪಿ ಸರ್ಕಾರದ ಕಳಪೆ ಕಾನೂನು ಸುವ್ಯವಸ್ಥೆಗೆ ಕನ್ನಡಿ. ಹಿಂದೊಮ್ಮೆ ಮಾಧ್ಯಮ ವರದಿಗಾರ್ತಿಗೆ ಬಿಜೆಪಿಯ ಹಿರಿಯ ನಾಯಕ ಈಶ್ವರಪ್ಪ ಅವರು ಆಡಿದ ಅಸಂಬದ್ಧ ಮಾತುಗಳೇ ಬಿಜೆಪಿಯ ಮಹಿಳಾ ವಿರೋಧಿ ಧೋರಣೆ ಹಾಗೂ ಮಹಿಳಾ ರಕ್ಷಣೆಯ ಬಗೆಗೆ ಇರುವ ಉದಾಸೀನತೆ ತೋರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
" ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಉತ್ತರ ಪ್ರದೇಶದ ಮಾದರಿಯಲ್ಲಿಯೇ ರಾಜ್ಯದಲ್ಲೂ ಅತ್ಯಾಚಾರ ಪ್ರಕರಣಗಳು ಘಟಿಸುತ್ತಿವೆ. ಬಿಜೆಪಿ ಸದಾ ಜಪಿಸುವ 'ಯುಪಿ ಮಾಡೆಲ್'ನ್ನು ರಾಜ್ಯದಲ್ಲಿ ಈ ಮೂಲಕ ಜಾರಿಗೊಳಿಸಲು ತೀರ್ಮಾನಿಸಿದೆ. ಚಾಮುಂಡಿ ಬೆಟ್ಟದಂತಹ ಪ್ರವಾಸಿತಾಣದಲ್ಲೂ ಪೊಲೀಸ್ ರಕ್ಷಣೆ, ಗಸ್ತು ಇಲ್ಲದಿರುವುದು ಸರ್ಕಾರದ ವೈಫಲ್ಯ ಗೃಹಸಚಿವರೇ ಎಂದು ಆರೋಪಿಸಿದೆ.
ಇನ್ನೊಂದೆಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ರಾಜ್ಯದಲ್ಲಿ ಕುಸಿದುಬಿದ್ದಿರುವ ಕಾನೂನು-ಸುವ್ಯವಸ್ಥೆಗೆ ಸಾಕ್ಷಿ.ಪೊಲೀಸರು ತಕ್ಷಣ ದುಷ್ಕರ್ಮಿಗಳನ್ನು ಬಂಧಿಸಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿ, ಭಯಭೀತ ಜನರಲ್ಲಿ ಧೈರ್ಯ ತುಂಬಬೇಕು. ಮೈಸೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಕ್ಷಣ ಸಿಎಂ ಬೊಮ್ಮಾಯಿ ಅವರು, ಬಹಳಷ್ಟು ಬೇಗ ಸಂಪುಟ ವಿಸ್ತರಣೆಯ ಸಂಕಟದಿಂದ ಪಾರಾಗಿ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳ ನಿಯಂತ್ರಣಕ್ಕೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ.