ಮಡಿಕೇರಿ, ಆ 25 (DaijiworldNews/PY): "ಕಾಂಗ್ರೆಸ್ನ ಹಡಗು ಸಮುದ್ರದ ನಡುವೆ ಸಿಲುಕಿ ಒದ್ದಾಡುತ್ತಿದೆ" ಎಂದು ಕೇಂದ್ರದ ಮಾಜಿ ಸಚಿವ ಡಿ. ವಿ ಸದಾನಂದ ಗೌಡ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಗೂಟದ ಕಾರು ಬೇಕಾಗಿತ್ತು. ಇದಕ್ಕಿಂತ ದೊಡ್ಡ ಹುದ್ದೆ ಸಿಗುವುದಿಲ್ಲ ಎಂದು ಅವರಿಗೆ ತಿಳಿದಿತ್ತು. ಹಾಗಾಗಿ, ಅವರ ಮನಸ್ಸಿನಲ್ಲಿದ್ದ ಕೆಲಸಗಳೆಲ್ಲವೂ ಈಡೇರುತ್ತಿದ್ದಂತೆ ಕುಮಾರಸ್ವಾಮಿ ಅವರ ರಾಜೀನಾಮೆ ಕೊಡಿಸಿದರು" ಎಂದು ಹೇಳಿದ್ದಾರೆ.
"ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗೊಂಡವರೆಲ್ಲಾ ರಾಜೀನಾಮೆ ನೀಡಿ, ಬಿಜೆಪಿಗೆ ಬಂದು ಬೆಂಬಲ ನೀಡಿದರು. ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಯಾವುದೇ ರೀತಿಯಾದ ಸಮಸ್ಯೆ ಇಲ್ಲ. ಖಾತೆ ವಿಚಾರಕ್ಕೆ ಸಂಬಂಧಿಸಿದಂತೆ ಮುನಿಸು ಸರಿಯಾಗಿದೆ. ಹಾಗಾಗಿ ಸರ್ಕಾರ ಅವಧಿಯನ್ನು ಪೂರ್ಣಗೊಳಿಸುತ್ತದೆ" ಎಂದಿದ್ದಾರೆ.
ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, "ಸ್ಯಾಂಡಲ್ವುಡ್ ನಟಿಯರಾದ ಸಂಜನಾ ಗರ್ಲಾನಿ ಹಾಗೂ ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದಲ್ಲಿ ಕಾನೂನು ತನ್ನ ನಿಜಸ್ವರೂಪ ಏನೆಂದು ತೋರಿಸಲಿ. ಯಾವ ಸೆಕ್ಷನ್ಗಳ ಮೇಲೆ ಕೋರ್ಟ್ ಕ್ರಮ ತೆಗೆದುಕೊಳ್ಳುವುದೋ ತೆಗೆದುಕೊಳ್ಳಲಿ. ಉಳಿದವರಿಗೆ ಇದು ಎಚ್ಚರಿಕೆಯ ಗಂಟೆಯಾಗುತ್ತದೆ. ಕಾನೂನು ಸೂಕ್ತವಾದ ಕ್ರಮ ಕೈಗೊಳ್ಳಲಿ" ಎಂದು ಹೇಳಿದ್ದಾರೆ.
"ದೇಶದ ಅಭಿವೃದ್ದಿಗೆ ಯುವಶಕ್ತಿ ಬಳಕೆಯಾಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಆದರೆ, ಈ ರೀತಿಯಾದ ತಪ್ಪು ದಾರಿಗಳನ್ನು ಹಿಡಿಯುತ್ತಿರುವುದು ಸೂಕ್ತವಲ್ಲ. ಆಫ್ರಿಕನ್ ಪ್ರಜೆಗಳು ಇಂದು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದಾರೆ. ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ತೆಗೆದುಕೊಂಡಲ್ಲಿ ಯುವ ಸಮೂಹಕ್ಕೂ ಅರಿವು ಮೂಡುತ್ತದೆ" ಎಂದಿದ್ದಾರೆ.