ನವದೆಹಲಿ, ಆ 25 (DaijiworldNews/PY): "ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯೊಳಗೆ ದೇಶದ ಎಲ್ಲಾ ಶಿಕ್ಷಕರಿಗೆ ಕೊರೊನಾ ಲಸಿಕೆ ನೀಡಿ" ಎಂದು ಕೇಂದ್ರ ಆರೋಗ್ಯ ಸಚಿವರು ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.
ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಈ ಬಗ್ಗೆ ಮಾಹಿತಿ ನೀಡಿದ್ದು, "ಕೇಂದ್ರ ಸರ್ಕಾರ ಈ ತಿಂಗಳಿನಲ್ಲಿ ರಾಜ್ಯಗಳಿಗೆ ಎರಡು ಕೋಟಿ ಹೆಚ್ಚುವರಿ ಡೋಸ್ಗಳ ಕೊರೊನಾ ಲಸಿಕೆ ವಿತರಣೆ ಮಾಡುತ್ತಿದೆ" ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಾಸಿಕ ಡೋಸ್ ನೀಡುವ ಕೇಂದ್ರ ಸರ್ಕಾರದ ಪ್ರಸ್ತುತ ಯೋಜನೆಯಲ್ಲಿ ಹೆಚ್ಚುವರಿ ಲಸಿಕೆಗಳನ್ನು ನೀಡಲಾಗುತ್ತದೆ" ಎಂದು ತಿಳಿಸಿದ್ದಾರೆ.
"ಸೆ.5ರಂದು ಆಚರಿಸಲಾಗುತ್ತಿರುವ ಶಿಕ್ಷಕರ ದಿನಾಚರಣೆಯ ಮುಂಚಿತವಾಗಿ ಎಲ್ಲಾ ಶಾಲಾ ಶಿಕ್ಷಕರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಿ" ಎಂದು ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.
"ಆಗಸ್ಟ್ 23ರಿಂದ 9, 10, 11 ಹಾಗೂ 12ನೇ ತರಗತಿ ಆರಂಭಿಸಲಾಗಿದೆ. ಕೊರೊನಾ ಲಸಿಕೆ ಪಡೆಯಲು ಶಿಕ್ಷಕರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿಯಂತೆ ಶೇ.95ಕ್ಕಿಂತ ಅಧಿಕ ಶಿಕ್ಷಕರು ಕೊರೊನಾ ಲಸಿಕೆ ಪಡೆದಿದ್ದಾರೆ. ಕೊರೊನಾ ಲಸಿಕೆ ಪಡೆಯದ ಶಿಕ್ಷಕರು ತಪ್ಪದೇ ಕೊರೊನಾ ಲಸಿಕೆ ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ" ಎಂದು ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಹೇಳಿದ್ದಾರೆ.