ನವದೆಹಲಿ, ಆ 25 (DaijiworldNews/MS): ಭಾರತದಲ್ಲಿ ಕೋವಿಡ್-19 ಸೋಂಕು ಸಮುದಾಯ (ಪ್ಯಾಂಡೆಮಿಕ್) ಹಂತದಿಂದ ಸ್ಥಳೀಯ (ಎಂಡೆಮಿಕ್) ಹಂತ ತಲುಪಿ ಅಂದರೆ, ಇಲ್ಲಿ ಇನ್ನು ಕಡಿಮೆ ಅಥವಾ ಸಾಧಾರಣ ವೈರಾಣು ಹರಡುವಿಕೆ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಎಂಡೆಮಿಕ್ ಹಂತದಲ್ಲಿ ಸೋಂಕು ಪ್ರಸರಣ ಕಡಿಮೆ ಅಥವಾ ಮಧ್ಯಮ ಮಟ್ಟದಲ್ಲಿರುತ್ತದೆ . ಜನ ವೈರಾಣುವಿನ ಜೊತೆಗೆ ಬದುಕಲು ಕಲಿಯುತ್ತಾರೋ ಆ ಹಂತವನ್ನು ಎಂಡೆಮಿಕ್ ಸ್ಟೇಜ್ ಎಂದು ಕರೆಯುತ್ತಾರೆ. ಹೀಗಾಗಿ ಕೊವಿಡ್ -19 ಇನ್ಮುಂದೆ ಸ್ಥಳೀಯ ಜಾಡ್ಯವಾಗಿ ಇರಲಿದೆ ಎಂದು ಹೇಳಿದ್ದಾರೆ.
ಭಾರತದ ಜನಸಂಖ್ಯೆಯ ವೈವಿಧ್ಯತೆ ಮತ್ತು ದೇಶದ ವಿವಿಧ ಭಾಗಗಳಲ್ಲಿನ ರೋಗನಿರೋಧಕ ಶಕ್ತಿಯ ಪ್ರಮಾಣ ಗಮನಿಸಿದರೆ ದೇಶದ ಬೇರೆಬೇರೆ ಭಾಗಗಳಲ್ಲಿ ಪರಿಸ್ಥಿತಿಯು ಈಗಿರುವಂತೆ ಏರಿಳಿತಗಳ ಜೊತೆಗೆ ಮುಂದುವರಿಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಮತ್ತು ಎರಡನೇ ಅಲೆಯಲ್ಲಿ ಕೊರೊನಾದಿಂದ ಕಡಿಮೆ ಪರಿಣಾಮ ಹೊಂದಿದವರು ಅಥವಾ ಲಸಿಕೆ ನೀಡಿಕೆ ಕಡಿಮೆ ಇರುವಲ್ಲಿ ಮೂರನೇ ಅಲೆಯಲ್ಲಿ ಕೊರೊನಾ ಏರಿಕೆ ಆಗಬಹುದು ಎಂಬ ಭಿಪ್ರಾಯ ಸೌಮ್ಯ ಸ್ವಾಮಿನಾಥನ್ ವ್ಯಕ್ತಪಡಿಸಿದ್ದಾರೆ.