ಬೆಂಗಳೂರು, ಆ 25 (DaijiworldNews/PY): ಬಿಜೆಪಿ ಸರ್ಕಾರದ ಸ್ಥಿತಿ 'ಒಲ್ಲದ ಸಂಸಾರದಂತಿದೆ'! ಯಾವಾಗ ಬೇಕಿದ್ದರೂ ಡಿವೋರ್ಸ್ ಆಗಬಹುದು! ಎಂದು ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಕಾರ ಟೇಕಾಫ್ ಆಗಿಲ್ಲ, ಮುಂದೆಯೂ ಆಗುವುದಿಲ್ಲ ಎಂದು ಕಚೇರಿಯಿಂದ ವಿಮುಖರಾದ ಸಚಿವರ ಧೋರಣೆಯೇ ಹೇಳುತ್ತಿದೆ. ಕಚೇರಿಗೆ ತೆರಳಿ ತಮ್ಮ ನೂತನ ಖಾತೆಯ ವಿವರಗಳ ಪಡೆದು, ಅಧಿಕಾರಿಗಳೊಂದಿಗೆ ಚರ್ಚಿಸಿ, ಆಗಬೇಕಾದ ಕೆಲಸಗಳತ್ತ ಗಮನಿಸಬೇಕು. ಆದರೆ ಬಿಜೆಪಿ ಸರ್ಕಾರದ ಸ್ಥಿತಿ 'ಒಲ್ಲದ ಸಂಸಾರದಂತಿದೆ'! ಯಾವಾಗ ಬೇಕಿದ್ದರೂ ಡಿವೋರ್ಸ್ ಆಗಬಹುದು! ಎಂದು ವ್ಯಂಗ್ಯವಾಡಿದೆ.
"ಬಿಜೆಪಿಯ ಸಚಿವರೆಲ್ಲರೂ ಒಲ್ಲದ ಮನಸ್ಸಿನಿಂದ ಬಲವಂತವಾಗಿ ಕಚೇರಿಯಲ್ಲಿ ಕೂರಿಸಲ್ಪಟ್ಟವರೇ. ಸಚಿವರು ಒಲ್ಲದ ಖಾತೆಯಲ್ಲಿ ಶ್ರದ್ಧೆ ಕಳೆದುಕೊಂಡು ಅಭಿವೃದ್ಧಿ ಕೆಲಸಗಳು ನಿಂತ ನೀರಾಗುವುದು ಖಚಿತ. ತಮಗೆ ಸಿಕ್ಕಿರುವ ಖಾತೆಗಳ ಆಳ, ಅಗಲವನ್ನ ಅರ್ಥ ಮಾಡಿಕೊಂಡು, ಕೆಲಸಗಳ ಬಗ್ಗೆ ಚಿಂತಿಸಬೇಕಾದ ಬಿಜೆಪಿ ಸಚಿವರ ನಿರಾಸಕ್ತಿ ಎದ್ದು ಕಾಣುತ್ತಿದೆ" ಎಂದಿದೆ.
"ಕೇಂದ್ರದ ನೂತನ ಸಚಿವರದ್ದು ಕಚೇರಿ ಮರೆತು ಸುಳ್ಳಿನ ಯಾತ್ರೆ, ರಾಜ್ಯದ ನೂತನ ಸಚಿವರು ಕಚೇರಿಯಿಂದ ನಾಪತ್ತೆ. ಕೋವಿಡ್ 3ನೇ ಅಲೆಗೆ ಸಿದ್ಧಗೊಳ್ಳಬೇಕಿದೆ, ಆರ್ಥಿಕ ವೃದ್ಧಿಗೆ ಕ್ರಮ ಕೈಗೊಳ್ಳಬೇಕಿದೆ, ನೆರೆ ಸಂತ್ರಸ್ತರ ವೇದನೆ ಬಗೆಹರಿಸಬೇಕಿದೆ. ಆದರೆ ಮಂತ್ರಿಗಳೇ ನಾಪತ್ತೆ! ಟೇಕಾಫ್ ಆಗದ ಬಿಜೆಪಿ ಸರ್ಕಾರದ ಮಂತ್ರಿಗಳು ಎಲ್ಲಿದ್ದಾರೆ?" ಎಂದು ಪ್ರಶ್ನಿಸಿದೆ.