ಮೈಸೂರು, ಆ 25 (DaijiworldNews/MS): ಮೈಸೂರು ಮೇಯರ್ ಸ್ಥಾನ ಇದೇ ಮೊಟ್ಟಮೊದಲ ಬಾರಿಗೆ ಬಿಜೆಪಿ ಪಾಲಾಗಿದೆ. ಮೇಯರ್ ಆಗಿ ಬಿಜೆಪಿಯ ಸುನಂದಾ ಪಾಲನೇತ್ರ ಆಯ್ಕೆಯಾಗಿದ್ದಾರೆ. ಈ ಮೂಲಕ ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮುರಿದು ಬಿದ್ದಿರುವುದು ಬಿಜೆಪಿಗೆ ಲಾಭವಾಗಿ ಪರಿಣಮಿಸಿದೆ.
ಮೇಯರ್ ಪಟ್ಟ ತಮಗೆ ಲಭಿಸಬೇಕು ಎಂದು ಪಾಲಿಕೆ ಮೇಯರ್ ಚುನಾವಣೆಗೆ ಮೂರು ಪಕ್ಷದ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ವಾರ್ಡ್ 32ರ ಸದಸ್ಯೆ ಹೆಚ್.ಎಂ.ಶಾಂತಕುಮಾರಿ, ಜೆಡಿಎಸ್ ಸದಸ್ಯೆ ವಾರ್ಡ್ ನಂ 37ರ ಅಶ್ವಿನಿ ಆರ್ ಅನಂತು ಹಾಗೂ ಬಿಜೆಪಿ ಅಭ್ಯರ್ಥಿಯಾಗಿ 59ನೇ ವಾರ್ಡ್ನ ಸುನಂದಾ ಪಾಲನೇತ್ರ ನಾಮಪತ್ರ ಸಲ್ಲಿಸಿದ್ದರು.
ಬುಧವಾರ ನಡೆದ ಚುನಾವಣೆಯಲ್ಲಿ ಸುನಂದಾ 26 ಮತಗಳನ್ನು ಪಡೆದರೆ, ಜೆಡಿಎಸ್ ನ ಅಶ್ವಿನಿ ಅನಂತು 22 ಹಾಗೂ ಕಾಂಗ್ರೆಸ್ ನ ಎಚ್.ಎಂ.ಶಾಂತಕುಮಾರಿ 22 ಮತಗಳನ್ನು ಪಡೆದುಕೊಂಡರು.ಮೈಸೂರು ಪಾಲಿಕೆಯ ಇತಿಹಾಸದಲ್ಲಿ ಬಿಜೆಪಿ ಗೆ ಮೇಯರ್ ಸ್ಥಾನ ಸಿಕ್ಕಿದ್ದು ಇದೇ ಮೊದಲು.
ಮೇಯರ್ ಸ್ಥಾನ ಬಿಜೆಪಿಗೆ ಸಿಗುವುದು ಖಚಿತವಾಗುತ್ತಿದ್ದಂತೆಯೇ ಶಾಸಕ ತನ್ವೀರ್ ಸೇಠ್ ಹಾಗೂ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಗೆ ಧಿಕ್ಕಾರ ಕೂಗುತ್ತಾ ಸಭೆಯಿಂದ ಹೊರನಡೆದರು.