ಬೆಂಗಳೂರು, ಆ 25 (DaijiworldNews/PY): "ಕೊರೊನಾ ಸಂಭಾವ್ಯ ಮೂರನೇ ಅಲೆ ತಡೆಗೆ ಮುಂಜಾಗ್ರತಾ ಕ್ರಮವಾಗಿ ಟೆಸ್ಟಿಂಗ್ ನಿರ್ವಹಣೆಗೆ ನೂತನ ಕಾರ್ಯತಂತ್ರ ರೂಪಿಸಲಾಗಿದೆ" ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊರೊನಾ ಸಂಭಾವ್ಯ ಮೂರನೇ ಅಲೆ ತಡೆಗೆ ಮುಂಜಾಗ್ರತಾ ಕ್ರಮವಾಗಿ ಟೆಸ್ಟಿಂಗ್ ನಿರ್ವಹಣೆಗೆ ನೂತನ ಕಾರ್ಯತಂತ್ರ ರೂಪಾಸಲಾಗಿದೆ. ಜಿಲ್ಲಾವಾರು ಪರೀಕ್ಷಾ ಗುರಿಯನ್ನು 1.75 ಲಕ್ಷಕ್ಕೆ ಏರಿಸಲಾಗಿದೆ. ಒಟ್ಟು ಪರೀಕ್ಷೆಗಳಲ್ಲಿ ಶೇ.10ರಷ್ಟು ಪರೀಕ್ಷೆಗಳನ್ನು ಕಡ್ಡಾಯವಾಗಿ 18 ವರ್ಷ ಕೆಳಗಿನ ಮಕ್ಕಳಿಗೆ ಮಾಡಬೇಕು ಎಂದು ಸೂಚಿಸಲಾಗಿದೆ" ಎಂದಿದ್ದಾರೆ.
"ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡುವಿಕೆ ಮೇಲೆ ನಿಗಾ ವಹಿಸಲು ಒಟ್ಟಾರೆ ಪರೀಕ್ಷೆಗಳಲ್ಲಿ 50% ಪರೀಕ್ಷೆಗಳನ್ನು ತಾಲ್ಲೂಕು ಕೇಂದ್ರ ಪ್ರದೇಶದ ಹೊರಗೆ ನಡೆಸಲು ಸೂಚಿಸಲಾಗಿದೆ" ಎಂದು ಹೇಳಿದ್ದಾರೆ.
"ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆ ಇರುವ ಗ್ರಾ.ಪಂ./ ಪಟ್ಟಣ ಪ್ರದೇಶಗಳಲ್ಲಿ ರೋಗಲಕ್ಷಣರಹಿತ ಪ್ರಕರಣಗಳನ್ನು ಪೂಲಿಂಗ್ ಮೂಲಕ ಪರೀಕ್ಷೆಗೊಳಪಡಿಸಲಾಗುವುದು" ಎಂದು ತಿಳಿಸಿದ್ದಾರೆ.