ಮೈಸೂರು, ಆ 25 (DaijiworldNews/PY): ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಅವರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಸುಳಿವು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಕಡೆಗೆ ಹೋಗಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಸೇರಿದರೆ ನಾನು ಹಾಗೂ ನನ್ನ ಮಗ ಜಿ.ಡಿ ಹರೀಶ್ ಗೌಡನಿಗೆ ಟಿಕೆಟ್ ನೀಡಬೇಕಾಗುತ್ತದೆ ಎಂದು ತಿಳಿಸಿದ್ದೇನೆ. ನಾನು ಪಕ್ಷಕ್ಕೆ ಸೇರಿದ್ದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾನು ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ" ಎಂದಿದ್ದಾರೆ.
"ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರನ್ನು ಇತ್ತೀಚೆಗೆ ಭೇಟಿಯಾಗಿ ಪಕ್ಷ ತೊರೆಯುವ ಬಗ್ಗೆ ಹೇಳಿದ್ದೇನೆ. ಈ ವೇಳೆ ಅವರು ತಮ್ಮ ಜೊತೆ ಇರುವಂತೆ ಕೋರಿದರು. ಆಗದು ಎಂದು ನಾನು ಕ್ಷಮೆ ಕೇಳಿದೆ. ಈ ಬಗ್ಗೆ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದೆ" ಎಂದು ಹೇಳಿದ್ದಾರೆ.
"ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹುಣಸೂರು ಕ್ಷೇತ್ರದಿಂದ ನನ್ನ ಮಗ ಹರೀಶ್ ಗೌಡನಿಗೆ ಟಿಕೆಟ್ ನೀಡಲಿಲ್ಲ. ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಆತ ಭೇಟಿ ಮಾಡಿದ ಸಂದರ್ಭ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಸರಿಯಾದ ಸ್ಪಂದಿಸಿಲ್ಲ. ನನಗೆ ಪ್ರತಿ ಹಂತದಲ್ಲೂ ಅವಮಾನ ಮಾಡಿದ್ದಾರೆ" ಎಂದಿದ್ದಾರೆ.