ನವದೆಹಲಿ, ಆ 25 (DaijiworldNews/MS): "ಕಳೆದ 70 ವರ್ಷಗಳಲ್ಲಿ ನಿರ್ಮಿಸಿದ ಭಾರತದ ಸರ್ಕಾರಿ ಆಸ್ತಿಗಳನ್ನು, ತಮ್ಮ ಎರಡ್ಮೂರು ಉದ್ಯಮಿ ’ಸ್ನೇಹಿತರಿಗೆ’ ಮಾರಾಟ ಮಾಡಲಾಗುತ್ತಿದೆ" ಎಂದು ಮೋದಿ ಸರ್ಕಾರದ ನಡೆಯ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಾ ಪ್ರಹಾರ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯ ವಿರುದ್ಧ ಟೀಕಿಸಿ ಮಾತನಾಡಿದ ಅವರು, "ಭಾರತದಲ್ಲಿ ಕಳೆದ 70 ವರ್ಷಗಳಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂದು ಬಿಜೆಪಿ ಹಾಗೂ ಪ್ರಧಾನಿ ಮೋದಿ ಆರೋಪಿಸುತ್ತಾರೆ. ಆದರೆ ನಿನ್ನೆ, ಹಣಕಾಸು ಸಚಿವರು ಈ ಅವಧಿಯಲ್ಲಿ ಅಂದರೆ ಕಳೆದ 70 ವರ್ಷಗಳಲ್ಲಿ ನಿರ್ಮಿಸಿರುವ ಸ್ವತ್ತುಗಳನ್ನು ಮಾರಲು ಹೊರಟಿದ್ದಾರೆ" ಎಂದು ದೂರಿದ್ದಾರೆ.
"ಕಳೆದ 70 ವರ್ಷಗಳಲ್ಲಿ ನಿರ್ಮಿಸಿದ ಭಾರತದ ಸರ್ಕಾರದ ಆಸ್ತಿಯಾಗಿರುವುದನ್ನು 3-4 ಕೈಗಾರಿಕೋದ್ಯಮಿಗಳಿಗೆ' ಈಗ ಮಾರಾಟ ಮಾಡಲಾಗುತ್ತಿದೆ. ಪ್ರಮುಖ ಕ್ಷೇತ್ರಗಳಲ್ಲಿ ಏಕಸ್ವಾಮ್ಯವನ್ನು ಸೃಷ್ಟಿಸುವುದು ಕೇಂದ್ರ ಸರ್ಕಾರದ ಖಾಸಗೀಕರಣ ಯೋಜನೆಯ ಗುರಿಯಾಗಿದ್ದು, ಇದರಿಂದ ಉದ್ಯೋಗಗಳಿಗೆ ಕತ್ತರಿ ಬೀಳುತ್ತದೆ. ಜನರ 'ಗುಲಾಮಗಿರಿಗೆ' ಕಾರಣವಾಗುತ್ತದೆ" ಎಂದು ಆರೋಪಿಸಿದ್ದಾರೆ.
"ನಾವು ಖಾಸಗೀಕರಣದ ವಿರುದ್ಧವಲ್ಲ, ಆದರೆ ನಮ್ಮ ಖಾಸಗೀಕರಣ ಯೋಜನೆಯು ಒಂದು ತರ್ಕವನ್ನು ಹೊಂದಿತ್ತು. ಆದರೆ ಈಗ ನಡೆಯುತ್ತಿರುವ ಸಂಪೂರ್ಣ ಖಾಸಗೀಕರಣ, ಸ್ವತ್ತುಗಳ ನಗದೀಕರಣವನ್ನು ಹಣಗಳಿಕೆಯ ಏಕಸ್ವಾಮ್ಯವನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ. ಇದು 'ಅತ್ಯಂತ ಅಪಾಯಕಾರಿ'ಯಾಗಿದೆ . ಈಗ ಮಾಡಲಾಗುತ್ತಿರುವ ಸಂಪೂರ್ಣ ಖಾಸಗೀಕರಣ, ಮೂರು ಅಥವಾ ನಾಲ್ಕು ಜನರಿಗೆ ಮಾತ್ರ ಏಕಸ್ವಾಮ್ಯವನ್ನು ಸೃಷ್ಟಿಸುವುದಾಗಿದೆ. ಈ ಕ್ರಮವನ್ನು ಯಾರಿಗಾಗಿ ರೂಪಿಸಲಾಗಿದೆ ಎಂಬುದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.