ನವದೆಹಲಿ ಆ 24 (DaijiworldNews/MS): ತಾಲಿಬಾನ್ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿರುವ ಅಫ್ಘಾನಿಸ್ತಾನದ ಬೆಳವಣಿಗೆಯೂ ಪ್ರಪಂಚದ ಬೇರೆ ಬೇರೆ ದೇಶಗಳ ಮೇಲೆ ಪರಿಣಾಮ ಬೀರಿದೆ. ಎಲ್ಲಾ ದೇಶಗಳು ತಮ್ಮ ತಮ್ಮ ನಾಗರೀಕರನ್ನು ಸುರಕ್ಷಿತವಾಗಿ ಅಲ್ಲಿಂದ ಸ್ಥಳಾಂತರಿಸುವ ಕೆಲಸ ಮಾಡುತ್ತಿದೆ.
ಏತನ್ಮಧ್ಯೆ, ಅಫ್ಘಾನಿಸ್ತಾನದಲ್ಲಿ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಚರ್ಚಿಸಿದ್ದಾರೆ.
ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅವರು ಈ ಹಿಂದೆ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಜೊತೆ ಮಾತನಾಡಿದ್ದರು ಮತ್ತು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಪ್ರಪಂಚದ ಮೇಲೆ ಅದರ ಪರಿಣಾಮಗಳ ಬಗ್ಗೆ ಚರ್ಚಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ , "ಇದೀಗ ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಸ್ನೇಹಿತ ಹಾಗೂ ಅಧ್ಯಕ್ಷ ಪುಟಿನ್ ಜೊತೆ ವಿವರವಾದ ಮತ್ತು ಮಹತ್ವದ ಅಭಿಪ್ರಾಯಗಳ ವಿನಿಮಯವನ್ನು ಮಾಡಿಕೊಂಡಿದ್ದೇವೆ . ಕೋವಿಡ್ -19 ವಿರುದ್ಧ ಭಾರತ-ರಷ್ಯಾ ಸಹಕಾರ ಸೇರಿದಂತೆ ದ್ವಿಪಕ್ಷೀಯ ಅಜೆಂಡಾಗಳ ಬಗ್ಗೆ ಹಾಗೂ ಕೋವಿಡ್ -19 ವಿರುದ್ಧ ಹೋರಾಡಲು ಎರಡು ರಾಷ್ಟ್ರದ ಸಹಕಾರದ ಕುರಿತು ಹಾಗೂ ಇತರ ಪ್ರಮುಖ ವಿಷಯಗಳ ಕುರಿತು ನಿಕಟ ಸಮಾಲೋಚನೆ ನಡೆಸಿದ್ದೇವೆ" ಎಂದು ಹೇಳಿದ್ದಾರೆ .