ನವದೆಹಲಿ, ಆ 24 (DaijiworldNews/MS):ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ 'ಕಪಾಳಮೋಕ್ಷ' ಹೇಳಿಕೆ ನೀಡಿದ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಮಂಗಳವಾರ ಬಂಧಿಸಲಾಗಿದೆ. ರಾಣೆ ಸೋಮವಾರ ರಾಯಗಢ ಜಿಲ್ಲೆಯಲ್ಲಿ ಜನ್ ಆಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿ ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷವನ್ನೇ ತಪ್ಪಾಗಿ ಹೇಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯ ಕಪಾಳಕ್ಕೆ ಹೊಡೆಯಬೇಕು ಎನ್ನಿಸಿತ್ತು ಎಂದು ಏಕವಚನದಲ್ಲಿ, ಬಹಿರಂಗವಾಗಿ ನಿಂದಿಸಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಹೊಡೆಯುವುದಾಗಿ ಹೇಳಿಕೆ ಬೆನ್ನಲ್ಲೇ ಬಿಜೆಪಿ ಮತ್ತು ಶಿವಸೇನಾ ಕಾರ್ಯಕರ್ತರು ಕೇಂದ್ರ ಸಚಿವ ನಾರಾಯಣ್ ರಾಣೆ ಅವರ ಮನೆಯ ಮುಂದೆ ಗಲಾಟೆ ಮಾಡಿದ್ದರು.
ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ಗಳನ್ನು ರದ್ದು ಮಾಡಿ ಬಂಧನದಿಂದ ರಕ್ಷಣೆ ಕೋರಿ ರಾಣೆ ಮಂಗಳವಾರ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅವರ ಅರ್ಜಿಯನ್ನು ತಳ್ಳಿ ಹಾಕಿದ ಬೆನ್ನಲ್ಲೇ ಅವರನ್ನು ಪೊಲೀಸರು ಬಂಧಿಸಿದ್ದಾರೆ.