ಮಡಿಕೇರಿ, ಆ. 24(DaijiworldNews/HR): ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಾಲೇಜುಗಳು ಮತ್ತು ಶಾಲೆಗಳು ಪುನರಾರಂಭಗೊಂಡಿದ್ದರೂ, ಕೊಡಗಿನಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚು ಇರುವುದರಿಂದ ಕೊಡಗಿನ ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳನ್ನು ಹೆಚ್ಚು ಅವಲಂಬಿಸಿದ್ದಾರೆ. ವಿಪರ್ಯಾಸವೆಂದರೆ ಯಾವುದೇ ನೆಟ್ವರ್ಕ್ಗಳು ಕೊಡಗಿನಲ್ಲಿ ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಕೇರಳ ಗಡಿಯ ಸಮೀಪವಿರುವ ಹಳ್ಳಿಗಳ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ಹಾಜರಾಗಲು ಕೇರಳವನ್ನು ಅವಲಂಬಿಸಿದ್ದಾರೆ.
ಕೊಡಗು ಮತ್ತು ಕೇರಳದ ಗಡಿಯಲ್ಲಿರುವ ಕರಿಕೆ ಗ್ರಾಮದಲ್ಲಿ ಬಿಎಸ್ಎನ್ಎಲ್ 2ಜಿ ಹೊರತುಪಡಿಸಿ ಬೇರೆ ಯಾವುದೇ ನೆಟ್ವರ್ಕ್ ಸಿಗುತ್ತಿಲ್ಲ. ವಿದ್ಯುತ್ ಸರಬರಾಜು ಇಲ್ಲದಿದ್ದರೆ, ಈ ನೆಟ್ವರ್ಕ್ ಕೂಡ ಸ್ಥಗಿತಗೊಳ್ಳುತ್ತದೆ. ಆದ್ದರಿಂದ, ಕರಿಕೆ ಮತ್ತು ಚಟ್ಟುಕಾಯ ಗ್ರಾಮಗಳ ವಿದ್ಯಾರ್ಥಿಗಳು ತಮ್ಮ ಆನ್ಲೈನ್ ತರಗತಿಗಳನ್ನು ಕೇಳಲು ಕೇರಳದ ಪಣತ್ತೂರಿಗೆ ಹೋಗುತ್ತಾರೆ. ಈ ವಿದ್ಯಾರ್ಥಿಗಳು ಆಟೋ ರಿಕ್ಷಾ ಅಥವಾ ಮೋಟಾರ್ ಬೈಕುಗಳನ್ನು ಬಳಸಿ ಪಣತ್ತೂರಿಗೆ ಹೋಗಬೇಕು, ಕೆಲವು ಖಾಲಿ ಜಾಗಗಳಲ್ಲಿ ಅಥವಾ ಬೆಟ್ಟಗಳಲ್ಲಿ ಕುಳಿತು ಆನ್ಲೈನ್ ತರಗತಿ ಕೇಳಿ ತಮ್ಮ ಮನೆಗಳಿಗೆ ಹಿಂತಿರುಗಬೇಕು. ವಿದ್ಯಾರ್ಥಿಗಳಿಗೆ ಪ್ರತಿದಿನ ಈ ರೀತಿಯಾಗಿ ಬೇರೆ ಕಡೆಗೆ ಹೋಗುವುದು ಕಷ್ಟವಾಗಿದ್ದು,ಜೊತೆಗೆ ಕೇರಳ ಪೊಲೀಸರು ಅವರಿಂದ ಆರ್ಟಿ-ಪಿಸಿಆರ್ ನೆಗೆಟಿವ್ ವರದಿಗಳನ್ನು ಕೇಳುತ್ತಾರೆ.
ಹೇಗಾದರೂ ಆನ್ಲೈನ್ ತರಗತಿಗಳಿಗೆ ಹಾಜರಾಗಿ ಹಿಂದಿರುಗಿದ ವಿದ್ಯಾರ್ಥಿಗಳನ್ನು ಕರ್ನಾಟಕ ಪೊಲೀಸರು ಕರಿಕೆ ಚೆಕ್ ಪೋಸ್ಟ್ನಲ್ಲಿ ಕೊರೊನಾ ನೆಗೆಟಿವ್ ವರದಿಗಳನ್ನು ಕೇಳುತ್ತಾರೆ. ವರದಿಗಳಿಲ್ಲದ ವಿದ್ಯಾರ್ಥಿಗಳಿಗೆ ಹೋಗುವುದಕ್ಕೆ ಅವಕಾಶ ನೀಡುವುದಿಲ್ಲ. ವಿದ್ಯಾರ್ಥಿಗಳು 72 ಗಂಟೆಗಳಿಗಿಂತ ಕಡಿಮೆ ಇರುವ ನೆಗೆಟಿವ್ ವರದಿಯನ್ನು ಹೊಂದಿರಬೇಕು. ಪೋಷಕರಲ್ಲಿ ಒಬ್ಬರಾದ ನಾಸರ್, ವಿದ್ಯಾರ್ಥಿಗಳು ಹೆಚ್ಚಾಗಿ ಗಡಿ ಚೆಕ್ ಪೋಸ್ಟ್ ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಪೋಷಕರು ಕೇರಳಕ್ಕೆ ವಿದ್ಯಾರ್ಥಿಗಳೊಂದಿಗೆ ಹೋಗಬೇಕಾಗಿರುವುದರಿಂದ, ದೈನಂದಿನ ವೇತನವನ್ನು ಅವಲಂಬಿಸಿರುವ ಕುಟುಂಬಗಳಿಗೆ ತುಂಬಾ ಕಷ್ಟವಾಫ಼ಿದೆ. ಜಿಲ್ಲಾಧಿಕಾರಿ ಮತ್ತು ಮಂತ್ರಿಗಳಿಗೆ ಪದೇ ಪದೇ ನೆಟ್ವರ್ಕ್ ಸಮಸ್ಯೆಯ ಬಗ್ಗೆ ಹೇಳಲಾಗಿದೆ ಆದರೆ ಅವರು ಸಮಸ್ಯೆ ಪರಿಹರಿಸಲು ಏನನ್ನೂ ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.