ಬೆಂಗಳೂರು, ಆ 24 (DaijiworldNews/MS): ಖಾತೆ ಬಗ್ಗೆ ಅಸಮಾಧಾನ ಹೊಂದಿರುವ ಪರಿಸರ , ಜೀವಶಾಸ್ತ್ರ , ಪ್ರವಾಸೋದ್ಯಮ ಇಲಾಖೆಯ ಆನಂದ್ ಸಿಂಗ್ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಖಾತೆ ಬದಲಾವಣೆ ಮಾಡಿಯೇ ತೀರಬೇಕು ಎಂದು ಪಟ್ಟು ಹಿಡಿದಿರುವ ಆನಂದ್ ಸಿಂಗ್ ಅಧಿಕಾರವನ್ನು ವಹಿಸಿಕೊಳ್ಳದೆ ಮುನಿಸು ಮುಂದುವರಿಸಿದ್ದರು. ಪ್ರಬಲ ಖಾತೆ ಕೊಡುವಂತೆ ಪಟ್ಟು ಹಿಡಿದಿದ್ದ ಆನಂದ್ ಸಿಂಗ್ ತಮಗೆ ವಹಿಸಲಾದ ಇಲಾಖೆಯ ಜವಬ್ದಾರಿಯನ್ನು ತೆಗೆದುಕೊಂಡು ಸಭೆ ನಡೆಸಿರಲಿಲ್ಲ. ಪ್ರಮಾಣ ವಚನ ಸ್ವೀಕರಿಸಿ 20 ದಿನ ಕಳೆದರೂ ವಿಧಾನಸೌಧಕ್ಕೂ ಆಗಮಿಸಿರಲಿಲ್ಲ.
ಖಾತೆ ಬದಲಾವಣೆಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಜೊತೆಗಿನ ಸಂಧಾನ ಕೂಡಾ ಯಶಸ್ವಿಯಾಗಿಲ್ಲ. ನಾನು ಸಮ್ಮಿಶ್ರ ಸರ್ಕಾರದಲ್ಲಿ ತ್ಯಾಗ ಮಾಡಿ ಬಿಜೆಪಿ ಸರ್ಕಾರ ರಚನೆಗೆ ಕಾರಣನಾಗಿದ್ದೆ. ಅಂದು ನಾನು ಬಹಳಷ್ಟು ಪಾಡು ಪಟ್ಟಿದ್ದೇನೆ. ಈ ನಿಟ್ಟಿನಲ್ಲಿ ನಮ್ಮ ನಿರೀಕ್ಷೆಗಳನ್ನು ಈಡೇರಿಸಬೇಕು ಎಂಬುವುದು ಆನಂದ್ ಸಿಂಗ್ ವಾದವಾಗಿತ್ತು ಸದ್ಯ ವರಿಷ್ಟರ ಕಡೆಯಿಂದಲೂ ಖಾತೆ ಬದಲಾವಣೆಯಾಗುವ ಬಗ್ಗೆ ಯಾವುದೇ ಭರವಸೆ ಸಿಗದ ಕಾರಣ ಇಂದು ರಾಜ್ಯಪಾಲರನ್ನು ಬೇಟಿ ಮಾಡಿ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.