ಬೆಂಗಳೂರು, ಆ 23(DaijiworldNews/MS): ಕೊಲೆ ಪ್ರಕರಣ ಆರೋಪದಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿಜಯ್ ಕುಲಕರ್ಣಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸದಾಶಿವನಗರದಲ್ಲಿ ಇರುವ ಡಿಕೆ ಶಿವಕುಮಾರ್ ನಿವಾಸದಲ್ಲಿ ವಿನಯ್ ಕುಲಕರ್ಣಿ ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಪಕ್ಷ ವಿನಯ್ ಜೊತೆ ಇರಲಿದ್ದು, ವಿನಯ್ ಕುಲಕರ್ಣಿ ತಪ್ಪು ಮಾಡಿಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಘಟಕ, " ಕೊಲೆ ಪ್ರಕರಣದ ಆರೋಪಿ ವಿನಯ್ ಕುಲಕರ್ಣಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು? ಕೆಪಿಸಿಸಿ ಅಧ್ಯಕ್ಷರೇ ಆರೋಪಿಯನ್ನು ಮನೆಗೆ ಕರೆಸಿ ಸಾಂತ್ವನ ಹೇಳುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದಾಗ, ಕಾಂಗ್ರೆಸ್ ಪಕ್ಷ ಭವಿಷ್ಯದಲ್ಲಿ ಸೆಕ್ಷನ್ 307 ರದ್ದು ಮಾಡುವಂತೆ ಬೇಡಿಕೆ ಮುಂದಿಡುವ ಅಪಾಯವಿದೆ!!! ಎಂದು ಹೇಳಿದೆ.
ವಿನಯ್ ಕುಲಕರ್ಣಿ ಅವರ ನೋವನ್ನು ಆಲಿಸಿದ್ದೇನೆ, ಅವರ ಜತೆ ನಾವಿದ್ದೇವೆ ಎನ್ನುವ ಮೂಲಕ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಕೊಲೆ ಆರೋಪಿ ಬೆಂಬಲಕ್ಕೆ ನೀವು ಅಧಿಕೃತವಾಗಿ ನಿಲ್ಲುತ್ತಿದ್ದೀರಾ ಡಿಕೆಶಿ? ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಕೊಲೆ ಆರೋಪಿಯ ಬೆಂಬಲಕ್ಕೆ ನಿಂತು ದೇಶದ ಕಾನೂನಿಗೆ ಮೀರಿದ ವ್ಯಕ್ತಿಯಾಗಲು ಹೊರಟಿದ್ದೀರಾ? ಎಂದು ಪ್ರಶ್ನಿಸಿದೆ.