ಬೆಂಗಳೂರು, ಆ.23 (DaijiworldNews/HR): ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಶಿವಕುಮಾರ್, "ವಿನಯ್ ಕುಲಕರ್ಣಿ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರ ಪರ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ಅವರಿಗೆ ಪಕ್ಷದ ಸಂಪೂರ್ಣ ಬೆಂಬಲವಿದೆ. ನಾವೆಲ್ಲ ಜೊತೆಗೇ ಸಚಿವರಾಗಿ ಕೆಲಸ ಮಾಡಿದ್ದೇವೆ. ಆದರ, ಇತ್ತೀಚಿನ ರಾಜಕೀಯದಿಂದ ಅವರು ನೊಂದಿದ್ದಾರೆ" ಎಂದರು.
"ವಿನಯ್ ಕುಲಕರ್ಣಿ ಅವರಿಗೆ ಜೈಲಿನಲ್ಲಿ ಆಗಿರುವ ನೋವು, ಹೊರಗಡೆ ಆಗಿರುವ ನೋವು ಎಲ್ಲವನ್ನೂ ಅವರು ನನ್ನ ಬಳಿ ಹೇಳಿಕೊಂಡಿದ್ದು, ಅವರಿಗೆ ನ್ಯಾಯ ಸಿಗುತ್ತದೆ ಎಂದು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ಅವರು ಪಕ್ಷ ಸಂಘಟನೆಯಲ್ಲಿ ತೊಡುಗುತ್ತಾರೆ. ಅವರು ತಪ್ಪು ಮಾಡಿಲ್ಲ ಎನ್ನುವ ಅರಿವು ಅವರಿಗಿದೆ" ಎಂದಿದ್ದಾರೆ.
ಇನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿರುವ ಅಫ್ಗಾನಿಸ್ತಾನದ ನಾಲ್ವರು ವಿದ್ಯಾರ್ಥಿಗಳು ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಫ್ಗಾನಿಸ್ತಾನದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದ್ದಾರೆ.