ತುಮಕೂರು, ಆ.23 (DaijiworldNews/HR): ಶ್ರೀಗಂಧ ಮರವನ್ನು ಮೂವರು ವ್ಯಕ್ತಿಗಳು ಕಡಿಯುತ್ತಿರುವ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿ ಶರಣಾಗುವಂತೆ ಸೂಚಿಸಿದ್ದರು. ಆದರೆ ಮರ ಕಡಿಯುತ್ತಿದ್ದ ವ್ಯಕ್ತಿಯೋರ್ವ ಅಧಿಕಾರಿಯ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. ಆಗ ಅಧಿಕಾರಿಗಳು ಗುಂಡು ಹಾರಿಸಿದ್ದು, ಗುಂಡೇಟಿಗೆ ಬಲಿಯಾದ ಆ ವ್ಯಕ್ತಿಯ ಗುರುತು ಇಂದು ಪತ್ತೆಯಾಗಿದೆ.
ಗುಂಡೇಟಿಗೆ ಬಲಿಯಾದ ವ್ಯಕ್ತಿಯನ್ನು ರಾಮನಗರ ತಾಲೂಕಿನ ಮೇಟರ ದೊಡ್ಡಿ ಗ್ರಾಮದ ಶಿವರಾಜ್ (30) ಎಂದು ಗುರುತಿಸಲಾಗಿದೆ.
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಕಂಪ್ಲಾಪುರ ಮೀಸಲು ಅರಣ್ಯ ಪ್ರದೇಶದದಲ್ಲಿ ಮೂವರು ಶ್ರೀಗಂಧ ಮರ ಕಡಿಯುತ್ತಿದ್ದು, ಇದೇ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗೆ ವಿಷಯ ತಿಳಿದು ಪರಿಶೀಲನೆಗೆ ಮುಂದಾದರು. ಅದರೆ ಶ್ರೀಗಂಧದ ಮರ ಕಡಿಯುತ್ತಿದ್ದವರು ಏಕಾಏಕಿ ದಾಳಿ ಮಾಡಲು ಯತ್ನಿಸಿದರು. ಹೀಗಾಗಿ ಅಧಿಕಾರಿ ಗುಂಡು ಹಾರಿಸಿದರು ಎಂದು ಮಾಹಿತಿಯಿಂದ ತಿಳಿದುಬಂದಿತ್ತು.
ಆಗಸ್ಟ್ 20ರ ರಾತ್ರಿ ಮರ ಕಡಿಯುವ ಶಬ್ದ ಕೇಳಿದ್ದು, ಡಿಆರ್.ಎಫ್ ಮಹೇಶ್ ಹಾಗೂ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಆಗಸ್ಟ್ 21ರ ಬೆಳಿಗ್ಗೆ 9.30ರ ಸುಮಾರಿಗೆ ಕಳ್ಳರ ತಂಡ ಶ್ರೀಗಂಧದ ಮರ ಕಡಿಯುತ್ತಿರುವ ಸ್ಥಳ ಪತ್ತೆಯಾಗಿದೆ. ಈ ವೇಳೆ ಅರಣ್ಯಾಧಿಕಾರಿಗಳು ಮೂವರು ಕಳ್ಳರ ತಂಡ ಶ್ರೀಗಂಧ ಮರ ಕಡಿಯುತ್ತಿರುವುದನ್ನು ನೋಡಿ ತಕ್ಷಣವೇ ಮರ ಕಡಿಯುವುದನ್ನು ನಿಲ್ಲಿಸಿ ಶರಣಾಗುವಂತೆ ಮಹೇಶ್ ಸೂಚಿಸಿದರೂ ಆತ ಅಧಿಕಾರಿಯ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ ಆಗ ವಿಧಿಯಿಲ್ಲದೇ ಅರಣ್ಯಾಧಿಕಾರಿ ಮಹೇಶ್ ಗುಂಡು ಹಾರಿಸಿದ್ದಾರೆ.