ಚಿಂದ್ವಾರಾ, ಆ 23(DaijiworldNews/MS): ಮಧ್ಯಪ್ರದೇಶದ ಚಿಂದ್ವಾರಾ ಮತ್ತು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾನುವಾರ ನಡೆದ ಎರಡು ಪ್ರತ್ಯೇಕ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟಗಳಲ್ಲಿ ಬಲೂನ್ ಮಾರಾಟಗಾರ ಸೇರಿದಂತೆ ನಾಲ್ವರು ಸಾವನ್ನಪ್ಪಿ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿಂದ್ವಾರ ಪ್ರಕರಣದಲ್ಲಿ ರೈಲ್ವೇ ಕಾಲೋನಿಯ ತೇಜುದ್ದೀನ್ ಅನ್ಸಾರಿ (40 ) ಮತ್ತು ಶೇಕ್ ಇಸ್ಮಾಯಿಲ್ (70 ) ಮೃತಪಟ್ಟರೆ, ವಾರಣಾಸಿಯ ರಾಮನಗರ ಪ್ರದೇಶದಲ್ಲಿ ಗೀತಾ ದೇವಿ (40 ) ಮತ್ತು ಲಲ್ಲಾ (30 ) ಸಾವನ್ನಪ್ಪಿದ್ದಾರೆ.
ಗಾಯಾಳುಗಳಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಚಿಂದ್ವಾರ ಪ್ರಕರಣದಲ್ಲಿ ಸ್ಫೋಟದ ಶಬ್ಧ ಸುಮಾರು ದೂರದವರೆಗೆ ಕೇಳಿಸಿದ್ದು, ಕಂಪನದ ಅನುಭವವಾಗಿದೆ ಎನ್ನಲಾಗಿದೆ.
ಬಲೂನ್ ಮಾರಾಟಗಾರ ಬಲೂನುಗಳಲ್ಲಿ ಗ್ಯಾಸ್ ತುಂಬುತ್ತಿದ್ದಾಗ ಈ ಭಯಾನಕ ಘಟನೆ ನಡೆದಿದೆ ಎನ್ನಲಾಗಿದೆ.