ಬೆಂಗಳೂರು, ಆ. 22 (DaijiworldNews/SM): ರಾಜ್ಯದೆಲ್ಲೆಡೆ ಇಂದು ರಾಖಿ ಹಬ್ಬ ಆಚರಿಸಲಾಗಿದ್ದು, ಆದರೆ ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ್ ಈ ಬಾರಿ ವಿಶಿಷ್ಟ ರೀತಿಯಲ್ಲಿ ರಕ್ಷಾ ಬಂಧನ ಆಚರಿಸಿ ಗಮನಸೆಳೆದಿದ್ದಾರೆ.
ಕೋಟಿ ವೃಕ್ಷ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿ ಆ ಮೂಲಕ ಪರಿಸರದ ಜಾಗೃತಿ ಮೂಡಿಸಿರುವ ಮಾಜಿ ಸಚಿವರು ಈ ಬಾರಿ ಗಿಡ ಮರಗಳಿಗೂ ರಾಖಿ ಕಟ್ಟಿ ಅವುಗಳನ್ನೂ ರಕ್ಷಣೆ ಮಾಡಬೇಕು ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದಾರೆ.
ಇಂದು ಸ್ವತಃ ಮರದ ಕೊಂಬೆಗೆ ರಾಖಿ ಕಟ್ಟಿ, "ಅಕ್ಕ ತಂಗಿಯರು ತಮ್ಮ ಅಣ್ಣ ತಮ್ಮಂದಿರಿಗೆ ತಮ್ಮ ರಕ್ಷಣೆಗಾಗಿ ಹಾಗೂ ಉತ್ತಮ ಬಾಂಧವ್ಯ ಬೆಳೆಸುವ ಉದ್ದೇಶದಿಂದ ರಾಖಿ ಕಟ್ಟಿ ಹಬ್ಬ ಆಚರಿಸುತ್ತಾರೆ. ಅದೇ ರೀತಿ ನಾವು ಮಕ್ಕಳಲ್ಲಿ, ಯುವಜನರಲ್ಲಿ, ನಾಗರಿಕರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ಗಿಡ-ಮರಗಳಿಗೆ ರಕ್ಷಾಬಂಧನ ಮಾಡಿಸುವ ಮೂಲಕ ಅವುಗಳ ರಕ್ಷಣೆ ಮಾಡಬೇಕು" ಎನ್ನುವ ಮೂಲಕ ಮಾದರಿ ರೀತಿಯಲ್ಲಿ ಆಚರಣೆ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.