ಬಾಗಲಕೋಟೆ, ಆ. 22 (DaijiworldNews/HR): ಬಾದಾಮಿ ತಾಲ್ಲೂಕಿನ ಶಿವಯೋಗ ಮಂದಿರದ ದೇವರ ದರ್ಶನಕ್ಕೆ ಬಂದಿದ್ದ ಒಂದೇ ಕುಟುಂಬದ ಮೂವರು ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಮೃತಪಟ್ಟವರನ್ನು ಗದಗ ಜಿಲ್ಲೆಯ ರೋಣದವರಾದ ವಿಶ್ವನಾಥ್ ಮಾವಿನ ಮರದ (40), ಪತ್ನಿ ಶ್ರಿದೇವಿ ಮಾವಿನಮರದ (32) ಹಾಗೂ ಮಗಳು ನಂದಿನಿ (12) ಎಮ್ದು ಗುರುತಿಸಲಾಗಿದೆ.
ಬಾದಾಮಿಯ ಬನಶಂಕರಿ ದೇವಿ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆದಿದ್ದು, ಬಳಿಕ ಶಿವಯೋಗ ಮಂದಿರಕ್ಕೆ ತೆರಳಿದ್ದರು. ಅಲ್ಲಿ ಉಪಹಾರ ಸೇವಿಸಲು ಮಲಪ್ರಭಾ ನದಿ ದಡದಲ್ಲಿ ಕುಳಿತಿದ್ದರು. ಊಟ ಮಾಡಿ ಬಾಲಕಿ ನಂದಿನಿ ನದಿಯಲ್ಲಿ ಕೈ ತೊಳೆಯಲು ಹೋಗಿ, ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನ ರಕ್ಷಿಸಲು ವಿಶ್ವನಾಥ್ ಹಾಗೂ ಶ್ರೀದೇವಿ ದಂಪತಿ ನೀರಿಗೆ ಇಳಿದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ನಡೆಸಿ ಶ್ರಿದೇವಿ ಅವರ ಶವ ಹೊರಕ್ಕೆ ತೆಗೆಯಲಾಗಿದ್ದು, ಆದರೆ ವಿಶ್ವನಾಥ್ ಹಾಗೂ ಮಗಳು ನಂದಿನಿ ನೀರಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.