ತುಮಕೂರು, ಆ 22 (DaijiworldNews/PY): "ಆಗಸ್ಟ್ 23ರಿಂದ 9 ರಿಂದ 12ನೇ ತರಗತಿವರೆಗೆ ತರಗತಿ ಆರಂಭವಾಗಲಿದ್ದು, ಒತ್ತಾಯ ಪೂರ್ವಕವಾಗಿ ವಿದ್ಯಾರ್ಥಿಗಳು ಶಾಲೆಗೆ ಬರಬೇಕೆಂದು ಇಲ್ಲ" ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ತುಮಕೂರಿನಲ್ಲಿ ಶಾಲೆಗಳ ಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಳೆದ ಒಂದು ವರ್ಷದಿಂದ ಎಷ್ಟೇ ಪ್ರಯತ್ನಿಸಿದರೂ ಆನ್ಲೈಲ್ನಲ್ಲಿ ಉತ್ತಮವಾದ ಶಿಕ್ಷಣ ನೀಡಲು ಸಾಧ್ಯವಾಗಲಿಲ್ಲ. ಬೇರೆ ಕಾರಣಗಳಿಂದ ಉತ್ತಮ ಶಿಕ್ಷಣ ಕೊಡಲಾಗಲಿಲ್ಲ. ಕೊರೊನಾ ಪಾಸಿಟಿವಿಟ ದರ ಕಡಿಮೆ ಇರುವ ಕಾರಣದಿಂದ ತರಗತಿ ಆರಂಭ ಮಾಡಿ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದು, ಹಾಗಾಗಿ ಶಾಲೆಗಳನ್ನು ಆರಂಭಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
"ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ. ಅಲ್ಲದೇ, ಆನ್ಲೈನ್ ಹಾಗೂ ಆಫ್ಲೈನ್ನಲ್ಲಿಯೂ ತರಗತಿಗಳು ನಡೆಯಲಿವೆ. ಕೊರೊನಾದ ಮೂರನೇ ಅಲೆಯು ಮಕ್ಕಳಿಗೆ ಸಮಸ್ಯೆಯಾಗಲಿದೆ ಎಂದಿತ್ತು. ಆದರೆ, ಒಂದು ತಿಂಗಳಿನಿಂದ ಎಲ್ಲಾ ತಜ್ಞರು ಮಕ್ಕಳ ಮೇಲೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಈ ಹಿನ್ನೆಲೆ ಮುಂದಿನ ಹಂತದಲ್ಲಿ 1ರಿಂದ 8ನೇ ತರಗತಿವರೆಗೂ ಶಾಲೆ ತೆರೆಯುವ ಪ್ರಯತ್ನ ಮಾಡುತ್ತೇವೆ" ಎಂದಿದ್ದಾರೆ.
"ಶೇ.2ಕ್ಕಿಂತ ಅಧಿಕ ಪಾಸಿಟಿವಿಟಿ ದರ ಇದ್ದಲ್ಲಿ ಆ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸುವುದಿಲ್ಲ. ರಾಜ್ಯದ ಐದು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿದೆ" ಎಂದು ತಿಳಿಸಿದ್ದಾರೆ.