ಬೆಂಗಳೂರು, ಆ 22 (DaijiworldNews/PY): "ರಾಜ್ಯಕ್ಕಾಗುತ್ತಿರುವ ಲಸಿಕೆ ಹಂಚಿಕೆಯ ಅನ್ಯಾಯ ಪ್ರಶ್ನಿಸುವುದು ಬಿಟ್ಟು ಬಿಜೆಪಿ ಇತರ ರಾಜ್ಯಗಳ ಲಸಿಕೆ ಲೆಕ್ಕ ತೋರಿಸಿ ನಿತ್ಯವೂ ಮೋದಿ ಭಜನೆಯಲ್ಲಿ ತೊಡಗಿದೆ" ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಪ್ರತಿನಿತ್ಯ ಲಸಿಕೆ ಪಡೆಯಲು ಜನತೆ ಹರಸಾಹಸ ಪಡುತ್ತಿದ್ದಾರೆ, ಭಾನುವಾರದಂದು ಲಸಿಕೆಗಾಗಿ ಬರುವವರು ಹೆಚ್ಚು, ಹೀಗಿದ್ದೂ ಸರ್ಕಾರ ಲಸಿಕೆ ಕೊರತೆಯ ಬಗ್ಗೆ ಜಾಣಮೌನ ವಹಿಸಿದೆ. ರಾಜ್ಯಕ್ಕಾಗುತ್ತಿರುವ ಲಸಿಕೆ ಹಂಚಿಕೆಯ ಅನ್ಯಾಯ ಪ್ರಶ್ನಿಸುವುದು ಬಿಟ್ಟು ಬಿಜೆಪಿ ಇತರ ರಾಜ್ಯಗಳ ಲಸಿಕೆ ಲೆಕ್ಕ ತೋರಿಸಿ ನಿತ್ಯವೂ ಮೋದಿ ಭಜನೆಯಲ್ಲಿ ತೊಡಗಿದೆ" ಎಂದು ದೂರಿದೆ.
"ಕಚ್ಚಾ ತೈಲದ ಬೆಲೆ ಗಮನಾರ್ಹ ಇಳಿಕೆ ಕಂಡರೂ ದೇಶದ ಜನತೆಗೆ ಪೆಟ್ರೋಲ್ ಬೆಲೆ ಇಳಿಕೆಯ ಭಾಗ್ಯವಿಲ್ಲ. ಇಂಧನತೈಲಗಳ ಮೂಲಕ 'ಲೀಗಲೈಜ್ಡ್ ರಾಬರಿ' ಮಾಡುತ್ತಿದೆ ಬಿಜೆಪಿ ಸರ್ಕಾರ. ಪೆಟ್ರೋಲ್ ಬೆಲೆ ಇಳಿಸಿ ಎಂದರೆ 'ಸಾಧ್ಯವಿಲ್ಲ ಅಫಗಾನಿಸ್ತಾನಕ್ಕೆ ಹೋಗಿ' ಎನ್ನುವ ಬಿಜೆಪಿ ಪಕ್ಷದ ಜನದ್ರೋಹಿ ನೀತಿಯನ್ನು ಜನ ಅರ್ಥ ಮಾಡಿಕೊಳ್ಳುತ್ತಿದ್ದಾರೆ" ಎಂದು ಹೇಳಿದೆ.
"ಲಾಕ್ಡೌನ್ ನಷ್ಟದಿಂದ ರೈತರು, ಸರಕು ಸಾಗಣೆ ವಾಹನ ಮಾಲೀಕರು ಚೇತರಿಸಿಕೊಳ್ಳಲು ಪರದಾಡುತ್ತಿದ್ದಾರೆ, ಇದರೊಂದಿಗೆ ಇಂಧನತೈಲಗಳ ಬೆಲೆ ಏರಿಕೆಯ ಹೊರೆಯಿಂದ ಬದುಕು ದುಸ್ತರವಾಗಿರುವ ಹೊತ್ತಿನಲ್ಲಿ ಟೋಲ್ ಶುಲ್ಕ ಹೆಚ್ಚಿಸಿ ಜನರ ದರೊಡೆಗಿಳಿದಿದೆ. ಇಂತಹ ಜನವಿರೋಧಿ ಸರ್ಕಾರ ಹಿಂದೆಯೂ ಇರಲಿಲ್ಲ, ಮುಂದೆಯೂ ಬರುವುದಿಲ್ಲ" ಎಂದು ಕಿಡಿಕಾರಿದೆ.