ಕೋಲ್ಕತ್ತ, ಆ 22 (DaijiworldNews/PY): "ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮೊದಲು ಬಿಜೆಪಿಗೆ ಸೇರ್ಪಡೆಗೊಂಡಿದ್ದ ಮಾಜಿ ಸಚಿವ ಶ್ಯಾಮ್ಪ್ರಸಾದ್ ಮುಖರ್ಜಿ ಅವರನ್ನು ಸುಮಾರು 10 ಕೋಟಿ ರೂ. ಅಕ್ರಮ ಹಣಕಾಸು ವ್ಯವಹಾರದ ಆರೋಪದ ಅಡಿಯಲ್ಲಿ ಭಾನುವಾರ ಬಂಧಿಸಲಾಗಿದೆ" ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
"2020ರಲ್ಲಿ ವಿಷ್ಣುಪುರದ ಮಾಜಿ ಶಾಸಕ ಮುಖರ್ಜಿ ಮೇಲೆ ಅವರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾಗಿದ್ದ ಸಂದರ್ಭಇ-ಟೆಂಡರ್ ಹಾಗೂ ಇತರೆ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಹಣದ ದುರುಪಯೋಗಪಡಿಸಿಕೊಂಡ ಆರೋಪ ಕೇಳಿಬಂದಿತ್ತು. ಈ ಆರೋಪಗಳ ತನಿಖೆಗಳ ಬಳಿಕ ಶ್ಯಾಮ್ಪ್ರಸಾದ್ ಮುಖರ್ಜಿ ಅವರನ್ನು ಬಂಧಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಎಸ್ಡಿಪಿಒಯಿಂದ ಬಿಷ್ಣುಪುರದಲ್ಲಿ 9.91 ಕೋಟಿ ರೂ. ಹಣಕಾಸಿನ ಅವ್ಯವಹಾರದ ಆರೋಪದ ಬಗ್ಗೆ ತನಿಖೆ ಮಾಡಲಾಗಿದೆ. ತನಿಖೆಯ ಸಂದರ್ಭ ಸೂಕ್ತ ಉತ್ತರ ನೀಡುವಲ್ಲಿ ವಿಫಲವಾದ ಬಳಿಕ ಮುಖರ್ಜಿ ಅವರನ್ನು ಬಂಧಿಸಲಾಗಿದೆ" ಎಂದು ಬಂಕುರಾ ಎಸ್ಪಿ ಧೃತಿಮಾನ್ ಸರ್ಕಾರ್ ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.
"ಮುಖರ್ಜಿ ಅವರು ಪಶ್ಚಿಮಬಂಗಾಳ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರಿದ್ದರು. ಆದರೆ, ಅವರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರಲಿಲ್ಲ" ಎಂದು ವಿಷ್ಣುಪುರದ ಬಿಜೆಪಿಯ ಸಂಘಟನಾ ಜಿಲ್ಲಾಧ್ಯಕ್ಷ ಸುಜಿತ್ ಅಗಸ್ತಿ ತಿಳಿಸಿದ್ದಾರೆ.
"ಸದ್ಯ ಮುಖರ್ಜಿ ಅವರ ವಿರುದ್ದ ಕೇಳಿ ಬಂದ ಆರೋಪಗಳೆಲ್ಲವೂ ಅವರು ತೃಣಮೂಲ ಕಾಂಗ್ರೆಸ್ನಲ್ಲಿದ್ದ ಸಂದರ್ಭದಲ್ಲಿ ನಡೆದವು. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡಿದೆಯಾ?" ಎಂದು ಕೇಳಿದ್ದಾರೆ.