ಬೆಳಗಾವಿ, ಆ 22 (DaijiworldNews/PY): ಧಾರವಾಡ ಜಿ.ಪಂ. ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿನಿಂದ ಹೊರಬರುತ್ತಿದ್ದಂತೆಯೇ ಅವರ ವಿರುದ್ದ ಪ್ರಕರಣಗಳು ದಾಖಲಾಗಿವೆ.
ಕೊರೊನಾ ನಿಯಮ ಉಲ್ಲಂಘನೆ ಹಾಗೂ ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ ವಿನಯ್ ಕುಲಕರ್ಣಿ ಅವರ ವಿರುದ್ದ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳು ಸೇಬು ಹಾರ, ಗುಲಾಬಿ ಹಾರ ಹಾಕಿ ಸ್ವಾಗತಿಸಿದರು. ಕುಲಕರ್ಣಿಗೆ ಸ್ವಾಗತ ಕೋರಲು ಸುಮಾರು 100ಕ್ಕೂ ಅಧಿಕ ವಾಹನಗಳಲ್ಲಿ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರು ಆಗಮಿಸಿದ್ದರು.
ಮೆರವಣಿಗೆಯ ಸಂದರ್ಭ ಕೊರೊನಾ ನಿಯಮ ಉಲ್ಲಂಘಿಸಿದ ಕಾರಣ ವಿನಯ್ ಕುಲಕರ್ಣಿ ಸೇರಿದಂತೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ 300 ಮಂದಿಯ ವಿರುದ್ದ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ವಿನಯ್ ಕುಲಕರ್ಣಿ ಅವರ ವಿರುದ್ದವೇ ಮೂರು ಪ್ರಕರಣ ದಾಖಲಾಗಿದೆ. ಕೊರೊನಾ ನಿಯಮ ಉಲ್ಲಂಘಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಹಿಂಡಲಗಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನೀಡಿದ ದೂರು ಹಾಗೂ ಜಿಲ್ಲಾಧಿಕಾರಿಗಳ ಸೆಕ್ಷನ್ 188 ಆದೇಶ ಉಲ್ಲಂಘನೆ ಸೇರಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.