ಬೆಂಗಳೂರು, ಆ 22 (DaijiworldNews/PY): "ಆಗಸ್ಟ್ 23ರಿಂದ ರಾಜ್ಯದಲ್ಲಿ ಶಾಲಾರಂಭ ಆಗಲಿದ್ದರೂ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಾತ್ರ ತರಗತಿ ಆರಂಭವಾಗುವುದಿಲ್ಲ. ಕೊರೊನಾ ಪಾಸಿಟಿವಿಟಿ ದರ ಹೆಚ್ಚಿರುವ ಕಾರಣ ಮುಂದಿನ ಸೂಚನೆ ಬರುವವರೆಗೂ ಶಾಲಾರಂಭ ಇಲ್ಲ" ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಕೊರೊನಾ ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಐದು ಜಿಲ್ಲೆಗಳಲ್ಲಿ ಶಾಲೆ ಆರಂಭಿಸುವುದಿಲ್ಲ ಎಂದು ತಿಳಿಸಿತ್ತು. ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಶೇ.2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಕಾರಣ ಇಲ್ಲಿ ಸೋಮವಾರ ತರಗತಿ ಪ್ರಾರಂಭಿಸಲಾಗುತ್ತಿದೆ.
ಕೊರೊನಾ ವಾರ್ ರೂಂ ಬುಲೆಟಿನ್ ಪ್ರಕಾರ, ದಕ್ಷಿಣ ಕನ್ನಡ (ಶೇ. 3.2), ಉಡುಪಿ (ಶೇ. 2.8), ಕೊಡಗು (ಶೇ. 2.3) ಜಿಲ್ಲೆಗಳು ಮಾತ್ರ ಶೇ. 2ಕ್ಕಿಂತ ಅಧಿಕ ಪಾಸಿಟಿವಿಟಿ ದರ ಹೊಂದಿವೆ.
ಆಗಸ್ಟ್ 21ರ ಶನಿವಾರ ರಾಜ್ಯದಲ್ಲಿ 1,350 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. 18 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಶುಕ್ರವಾರಕ್ಕೆ ಹೋಲಿಸಿದರೆ ಕೊರೊನಾ ಸೋಂಕು ಪರೀಕ್ಷೆಗಳು 15 ಸಾವಿರ ಕಡಿಮೆಯಾಗಿದ್ದು, ಹೊಸ ಪ್ರಕರಣಗಳ ಸಂಖ್ಯೆ 103 ಇಳಿಕೆಯಾಗಿವೆ. ಪಾಸಿಟಿವಿಟಿ ದರ ಶೇ. 0.8 ಇದೆ. ಮರಣ ದರ ಶೇ. 1.3 ಇದೆ.
ಶನಿವಾರ ದ.ಕ ದಲ್ಲಿ 320 ಕೊರೊನಾ ಪ್ರಕರಣಗಳು ವರದಿಯಾಗಿವೆ. ಉಡುಪಿಯಲ್ಲಿ 177, ಹಾಸನದಲ್ಲಿ 101, ಬೆಂಗಳೂರಿನಲ್ಲಿ 260 ಹಾಗೂ ಮೈಸೂರಿನಲ್ಲಿ 102 ಪ್ರಕರಣಗಳು ವರದಿಯಾಗಿವೆ. ದ.ಕ.ದಲ್ಲಿ ನಾಲ್ಕು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.