ವಿಜಯಪುರ, ಆ 22 (DaijiworldNews/PY): "ಬ್ಲ್ಯಾಕ್ ಫಂಗಸ್ಗೆ ತುತ್ತಾದವರು ಗುಣಮುಖರಾಗುವವರೆಗೂ ರಾಜ್ಯ ಸರ್ಕಾರವೇ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆಸ್ಪತ್ರೆಗೆ ದಾಖಲಾಗಿರುವಾಗ ಅಷ್ಟೇ ಅಲ್ಲದೇ, ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಇನ್ನು ಮುಂದೆ ರಾಜ್ಯ ಸರ್ಕಾರವೇ ಭರಿಸಲಿದೆ. ಸೋಂಕಿತ ವ್ಯಕ್ತಿ ಗುಣಮುಖವಾಗುವ ತನಕ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು" ಎಂದಿದ್ದಾರೆ.
"ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ಕಡಿಮೆಯಾಗಿವೆ. ಸೋಂಕಿಗೊಳಗಾದ ಮಂದಿ ಚಿಕಿತ್ಸೆಗಾಗಿ ಕಷ್ಟ ಪಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ನೀಡಲಾಗುವ ಪ್ರತೀ ಡೋಸ್ ಇಂಜೆಕ್ಷನ್ಗೆ 10,000 ರೂ.ನಿಂದ 12,000 ರೂ. ವೆಚ್ಚವಾಗುತ್ತದೆ. ಸೋಂಕಿಗೊಳಗಾದ ಜನರು ಈ ಇಂಜೆಕ್ಷನ್ ಅನ್ನು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ಪಡೆದುಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆ ಜನರು ಹಾಗೂ ಅವರ ಕುಟುಂಬಸ್ಥರ ಮೇಲಿನ ಹೊರೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ತೀರ್ಮಾನ ಕೈಗೊಂಡಿದೆ" ಎಂದು ತಿಳಿಸಿದ್ದಾರೆ.