ಬೆಂಗಳೂರು, ಆ. 21 (DaijiworldNews/HR): ನೂತನವಾಗಿ ನೇಮಕಗೊಂಡು ಇದುವರೆಗೆ ಕರ್ತವ್ಯಕ್ಕೆ ಹಾಜರಾಗದ ವೈದ್ಯರಿಗೆ ಕೂಡಲೇ ನೋಟಿಸ್ ನೀಡಬೇಕು. ನೋಟಿಸ್ ನೀಡಿದರೂ ಹಾಜರಾಗದಿದ್ದರೆ ಅವರ ನೇಮಕಾತಿಯನ್ನು ರದ್ದುಪಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವ ಕಡೆಯ ಸಿಬ್ಬಂದಿ ಹಾಗೂ ವೈದ್ಯರ ನಿಯೋಜನೆಯನ್ನು ರದ್ದುಗೊಳಿಸಬೇಕು. ಕೆಲಸದ ಒತ್ತಡ ಆಧರಿಸಿ ತಾತ್ಕಾಲಿಕವಾಗಿ ಅಗತ್ಯವಿರುವ ಕಡೆಗಳಲ್ಲಿ ಮಾತ್ರ ನಿಯೋಜಿಸಬೇಕು" ಎಂದರು.
ಇನ್ನು "ಡಯಾಲಿಸಿಸ್ ಚಿಕಿತ್ಸೆಗೆ ದೊರಕದಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ಒಂದೆರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.
ಕೊರೊನಾ ಹೆಚ್ಚಾಗುತ್ತಿದ್ದು ಗಡಿಭಾಗದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಬೇಕು ಎಂದು ಸೂಚಿಸಿದ್ದಾರೆ.