ಬೆಂಗಳೂರು, ಆ 21 (DaijiworldNews/PY): "ಬಿಜೆಪಿ ತನ್ನನ್ನು ತಾನು ವಾಷಿಂಗ್ ಮಷಿನ್ ಎಂದುಕೊಂಡಿದೆ. ಅಧಿಕಾರ ದುರ್ಬಳಕೆಯ ಬಿಜೆಪಿಯ ದುಷ್ಟ ರಾಜಕಾರಣದ ಅಂತ್ಯ ಸಮೀಪಿಸುತ್ತಿದೆ" ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಪಕ್ಷದ ಅಧ್ಯಕ್ಷರನ್ನು ಪಕ್ಷದ ಶಾಸಕರು ಭೇಟಿ ಮಾಡುವುದು ಸಹಜ, ಕಾಂಗ್ರೆಸ್ನ ಒಗ್ಗಟ್ಟು ನೋಡಿ ಒಡೆದ ಮನೆಯಾಗಿರುವ ಬಿಜೆಪಿ ಅಸೂಯೆಪಡುವುದು ಸಹಜವೇ. ಬಿಜೆಪಿಯಲ್ಲಿ ಒಬ್ಬರು ಅಲ್ಲಿ, ಇನ್ನೊಬ್ಬರು ಇಲ್ಲಿ, ಮತ್ತೊಬ್ಬರು ದಿಲ್ಲಿ ಎಂಬಂತಾಗಿದೆ! ಕಾಂಗ್ರೆಸ್ ಕಚೇರಿಯ ಕಿಟಕಿ ಇಣುಕುತ್ತಿದ್ದರೆ ಬಿಜೆಪಿಯ ಪಂಜರದ ಗಿಳಿಗಳು ಹಾರಿ ಹೋಗುತ್ತವೆ!" ಎಂದಿದೆ.
"ಬಿಜೆಪಿ ತನ್ನನ್ನು ತಾನು ವಾಷಿಂಗ್ ಮಷಿನ್ ಎಂದುಕೊಂಡಿದೆ, ಯಾರು ಆಪರೇಷನ್ ಕಮಲಕ್ಕೆ ಒಳಪಡುವರೋ ಅವರ ಭ್ರಷ್ಟಾಚಾರಗಳು ತೊಳೆದು ಪರಿಶುದ್ಧರಾಗುತ್ತಾರೆ, ಯಾರು ಬಿಜೆಪಿ ತಾಳಕ್ಕೆ ಕುಣಿಯುವುದಿಲ್ಲವೋ ಅವರ ಮೇಲೆ ಸಲ್ಲದ ಆರೋಪ, ಇಲ್ಲದ ಕೇಸ್ ಹಾಕಲಾಗುತ್ತದೆ. ಅಧಿಕಾರ ದುರ್ಬಳಕೆಯ ಬಿಜೆಪಿಯ ದುಷ್ಟ ರಾಜಕಾರಣದ ಅಂತ್ಯ ಸಮೀಪಿಸುತ್ತಿದೆ" ಎಂದು ಹೇಳಿದೆ.
"ರಾಜಸ್ತಾನದಲ್ಲಿ ಬೆಂಕಿ ಹಚ್ಚಿ ಕೊಲೆಗೈದ ಆರೋಪಿಯನ್ನು ಮೆರವಣಿಗೆ ಮಾಡಿದ್ದು. ಯುಪಿಯ ಅತ್ಯಾಚಾರಿ ಶಾಸಕನನ್ನ ಮೆರವಣಿಗೆಯಲ್ಲಿ ಜೈಲಿನಿಂದ ಕರೆತಂದಿದ್ದು. ಕೊಲೆ ಆರೋಪದಲ್ಲಿ ಗಡಿಪಾರಾಗಿದ್ದವರನ್ನು ಕೇಂದ್ರ ಗೃಹಮಂತ್ರಿ ಮಾಡಿದ್ದು. ಭ್ರಷ್ಟಾಚಾರ ಆರೋಪದಲ್ಲಿ ಜೈಲು ಸೇರಿದ್ದವರನ್ನು ಕರೆತಂದು ಸಿಎಂ ಮಾಡಿದ್ದು. ಇವೆಲ್ಲ ಬಿಜೆಪಿ ಜೈಲುಸಾಧನೆ!" ಎಂದಿದೆ.