ಬಳ್ಳಾರಿ, ಆ 21 (DaijiworldNews/PY): "ಸಾರಿಗೆ ನೌಕರರ ವೇತನ ತಾರತಮ್ಯ ನಿವಾರಣೆ ಮಾಡಲಾಗುವುದು. ಹಬ್ಬದ ಸಂದರ್ಭ ತೊಂದರೆಯಾಗದಂತೆ ಎರಡು ತಿಂಗಳ ವೇತನವನ್ನು ನೀಡಲಾಗುವುದು" ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, "ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಲಾಭವೂ ಇಲ್ಲದೇ, ನಷ್ಟವೂ ಇಲ್ಲದೇ ಸಾರಿಗೆ ಸಂಸ್ಥೆಯನ್ನು ನಡೆಸುವ ಅವಶ್ಯಕತೆ ಇದೆ. ಸದ್ಯ, ಬಸ್ಸುಗಳು ಭರ್ತಿಯಾಗುತ್ತಿಲ್ಲ. ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡಿಗೆ ಬಸ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ" ಎಂದಿದ್ದಾರೆ.
"ಕೇಂದ್ರದಿಂದ 800 ಹಾಗೂ ರಾಜ್ಯದಿಂದ 600 ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿ ಮಾಡಲಾಗುವುದು" ಎಂದು ತಿಳಿಸಿದ್ದಾರೆ.
ಈ ವೇಳೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಅವರು, "ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ದೆಹಲಿಗೆ ಹೋದ ವೇಳೆ ಮಾತ್ರ ಒಂದಾಗುತ್ತಾರೆ" ಎಂದು ಹೇಳಿದ್ದಾರೆ.